ಸಿಲ್ಕ್ಯಾರಾ ಸುರಂಗ ಕುಸಿತ ರಕ್ಷಣಾ ಕಾರ್ಯಾಚರಣೆ
ಸಿಲ್ಕ್ಯಾರಾ ಸುರಂಗ ಕುಸಿತ ರಕ್ಷಣಾ ಕಾರ್ಯಾಚರಣೆ

ಸಿಲ್ಕ್ಯಾರಾ ಸುರಂಗ ಕುಸಿತ: ಡ್ರಿಲಿಂಗ್‌ ಯಂತ್ರಕ್ಕೆ ಅಡ್ಡಿ, ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ತಾತ್ಕಾಲಿಕ ಸ್ಥಗಿತ

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ಕುಸಿತ ದುರಂತದಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಮತ್ತೆ ಅಡ್ಡಿ ಎದುರಾಗಿದ್ದು, ಸುರಂಗ ಕೊರೆಯುತ್ತಿದ್ದ ಮಾರ್ಗ ಮಧ್ಯೆ ಮತ್ತೆ ಅಡ್ಡಿ ಎದುರಾಗಿದ್ದು ಕೊರೆಯುವ ಕಾರ್ಯವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.
Published on

ಡೆಹ್ರಾಡೂನ್: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ಕುಸಿತ ದುರಂತದಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಮತ್ತೆ ಅಡ್ಡಿ ಎದುರಾಗಿದ್ದು, ಸುರಂಗ ಕೊರೆಯುತ್ತಿದ್ದ ಮಾರ್ಗ ಮಧ್ಯೆ ಮತ್ತೆ ಅಡ್ಡಿ ಎದುರಾಗಿದ್ದು ಕೊರೆಯುವ ಕಾರ್ಯವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.

ಹೌದು.. ಕುಸಿದಿರುವ ಸಿಲ್ಕ್ಯಾರಾ ಸುರಂಗದ ಅವಶೇಷಗಳ ಮೂಲಕ ಕೊರೆಯುವ ಕಾರ್ಯವನ್ನು ಶುಕ್ರವಾರ ಮತ್ತೆ ಸ್ಥಗಿತಗೊಳಿಸಲಾಗಿದೆ. ನಿನ್ನೆ ಅಂದರೆ ಗುರುವಾರವೂ ಇಂತಹುದೇ ತಾಂತ್ರಿಕದೋಷದಿಂದ ಕೊರೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಕೊರೆಯುತ್ತಿದ್ದ ಮಾರ್ಗಮಧ್ಯೆ ಅಡ್ಡಿ ಎದುರಾಗಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಮತ್ತೆ ಮುಂದಕ್ಕೆ ಹೋಗಿದೆ.

12 ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ (Rescue Operation) ಶುಕ್ರವಾರವೂ ಮತ್ತೊಂದು ಹಿನ್ನಡೆ ಉಂಟಾಗಿದ್ದು, ಡ್ರಿಲಿಂಗ್ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಆಗರ್ ಡ್ರಿಲಿಂಗ್ ಯಂತ್ರದಲ್ಲಿ(Drilling Machine) ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿನ್ನಡೆಯಾಯಿತು. ಕಾರ್ಮಿಕರು ಸಿಲುಕಿರುವ ಜಾಗಕ್ಕೆ ತಲುಪಲು ಇನ್ನೂ 12 ಮೀ. ಡ್ರಿಲಿಂಗ್ ಕೊರೆಯುವುದು ಬಾಕಿ ಉಳಿದಿದೆ. 

ಶುಕ್ರವಾರ ಕಾರ್ಯಾಚರಣೆಯನ್ನು ಪುನರಾರಂಭಿಸಿದ ಸ್ವಲ್ಪ ಸಮಯದ ನಂತರ ಆಗರ್ ಡ್ರಿಲ್ಲಿಂಗ್ ಯಂತ್ರವು ಮತ್ತೊಂದು ಅಡಚಣೆಯನ್ನು ಎದುರಿಸಿತು. ಈ ಅಡ್ಡಿ ಬಹುಶಃ ಲೋಹದ ವಸ್ತುವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ತಾಂತ್ರಿಕ ಅಡಚಣೆ ಎದುರಾದ್ದರಿಂದ ಕೊರೆಯುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಒಂದು ದಿನದ ನಂತರ ಮತ್ತೆ ಸ್ಥಗಿತ ಮಾಡಲಾಯಿತು. ಆರಂಭದಲ್ಲಿ ತಾಂತ್ರಿಕ ತೊಂದರೆಯನ್ನು ನಿವಾರಿಸಲಾಯಿಸಿ ಕೊರೆಯುವ ಕಾರ್ಯವನ್ನು ಶುರು ಮಾಡಲಾಯಿತು. ಶುರುವಾದ ಕೆಲವೇ ಸಮಯದಲ್ಲಿ ಮತ್ತೆ ಅಡ್ಡಿಯುಂಟಾದ್ದರಿಂದ 25 ಟನ್ ಭಾರದ ಆಗರ್ ಯಂತ್ರ ಮತ್ತೆ ಸ್ಥಗಿತವಾಗಿತ್ತು. ಕಳೆದ ಎರಡು ದಿನದಲ್ಲಿ ಎರಡನೇ ಬಾರಿಗೆ ಆಗರ್ ಡ್ರಿಲಿಂಗ್ ಮಷಿನ್ ಸ್ಥಗಿತವಾಗಿದೆ.

ಪೈಪ್ ಮೂಲಕ ಕಾರ್ಮಿಕರ ರಕ್ಷಣೆಗೆ ಯೋಜನೆ
ಇನ್ನು ಕಾರ್ಮಿಕರ ರಕ್ಷಣೆಗೆ ಪದೇ ಪದೇ ಸಮಸ್ಯೆ ಎದುರಾಗಿತ್ತಿದ್ದು, ಇದರ ನಡುವೆಯೇ ಕಾರ್ಮಿಕರನ್ನು ರಕ್ಷಿಸಲು ಮತ್ತೊಂದು ಯೋಜನೆ ರೂಪಿಸಲಾಗುತ್ತಿದೆ. ಸುರಂಗದಲ್ಲಿ ದೊಡ್ಡದೊಂದು ಪೈಪ್‌ ಅಳವಡಿಸಿ, ಚಕ್ರ ಇರುವ ಸ್ಟ್ರೆಚರ್‌ಗಳ (Stretchers) ಮೂಲಕ ಕಾರ್ಮಿಕರನ್ನು ಹೊರಗೆ ಕರೆತರಲು ಪ್ಲಾನ್‌ ರೂಪಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯು ಇದರ ಕುರಿತು ಪ್ರಾತ್ಯಕ್ಷಿಕೆಯನ್ನೂ ಕೈಗೊಂಡಿದ್ದಾರೆ. ಅದರ ವಿಡಿಯೊವನ್ನೂ ಬಿಡುಗಡೆ ಮಾಡಿದ್ದಾರೆ. ಸುರಂಗದಲ್ಲಿ ಕಾರ್ಮಿಕರು ಇರುವ ಜಾಗಕ್ಕೆ ದೊಡ್ಡದೊಂದು ಪೈಪ್‌ ಅಳವಡಿಸಲಾಗುತ್ತದೆ.

ಸ್ಟ್ರೆಚರ್‌ಗಳ ಮೇಲೆ ಕಾರ್ಮಿಕರನ್ನು ಮಲಗಿಸಿ, ಅವರನ್ನು ಹಗ್ಗದಿಂದ ಎಳೆಯಲಾಗುತ್ತಿದೆ. ಕಾರ್ಮಿಕರ ದೇಹದ ಭಾಗಗಳಿಗೆ ಯಾವುದೇ ಹಾನಿಯಾಗಬಾರದು, ಅವರು ಸುರಕ್ಷಿತವಾಗಿ ಹೊರಗೆ ಬರಬೇಕು ಎಂಬ ಕಾರಣದಿಂದಾಗಿ ಸ್ಟ್ರೆಚರ್‌ಗಳ ಮೂಲಕವೇ ಕರೆತರಲು ತೀರ್ಮಾನಿಸಲಾಗಿದೆ. ಪ್ರಾತ್ಯಕ್ಷಿತೆಯೂ ಯಶಸ್ವಿಯಾದ ಕಾರಣ ಸುಲಭವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಬಹುದು ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಕಿ ಉಳಿದಿರುವ ಸುರಂಗ ಕೊರೆದ ಬಳಿಕವೇ ಪೈಪ್‌ ಅಳವಡಿಸಲಾಗುತ್ತದೆ. ಇದಕ್ಕಾಗಿ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದರು. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿದೆ. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com