ಬೆಂಗಳೂರು: ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ, ಅದ್ಭುತ ಅನುಭವ ಎಂದ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ(HAL) ಭೇಟಿ ನೀಡಿದ ಸಂದರ್ಭದಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.
ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ
ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ(HAL) ಭೇಟಿ ನೀಡಿದ ಸಂದರ್ಭದಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.

ಹೆಚ್ ಎಎಲ್ ನ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಪ್ರಧಾನಮಂತ್ರಿ ಅವರು ನಗರಕ್ಕೆ ಬಂದಿದ್ದರು. ತೇಜಸ್ ಯುದ್ಧ ವಿಮಾನ ಸೇರಿದಂತೆ ಹೆಚ್ ಎಎಲ್‌ನ ಉತ್ಪಾದನಾ ಸೌಲಭ್ಯವನ್ನು ಪ್ರಧಾನಿ ತಮ್ಮ ಭೇಟಿ ವೇಳೆ ಸುಮಾರು 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿದರು. 

ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, ಇಂದು ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದೆ. ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ಸ್ವಾವಲಂಬನೆಯ ಕ್ಷೇತ್ರದಲ್ಲಿ ಜಗತ್ತಿನ ಯಾವ ದೇಶಕ್ಕಿಂತ ನಾವು ಕಡಿಮೆಯಿಲ್ಲ ಎಂದು ನಾನು ಅಪಾರ ಹೆಮ್ಮೆಯಿಂದ ಹೇಳಬಲ್ಲೆ. ಭಾರತೀಯ ವಾಯುಪಡೆ, ಡಿಆರ್ ಡಿಒ ಮತ್ತು ಹೆಚ್ ಎಎಲ್ ಮತ್ತು ಎಲ್ಲಾ ಭಾರತೀಯರಿಗೆ ಮನದಾಳದ ಅಭಿನಂದನೆಗಳು.

ತೇಜಸ್‌ ಯುದ್ಧ ವಿಮಾನದಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವ ವಿಸ್ಮಯಕಾರಿಯಾಗಿತ್ತು. ನಮ್ಮ ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ಥಳೀಯ ಉತ್ಪನ್ನಗಳ ಸಾಮರ್ಥ್ಯಗಳಲ್ಲಿ ನನ್ನ ವಿಶ್ವಾಸ ಖಂಡಿತಾ ಹೆಚ್ಚಾಗಿದೆ. ನಮ್ಮ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಹೆಮ್ಮೆಯ ಭಾವ ಮತ್ತು ಆಶಾಭಾವನೆ ಹೆಚ್ಚಾಗಿದೆ ಎಂದರು. 

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಕ್ಷಣಾ ಉತ್ಪನ್ನಗಳ ಸ್ವದೇಶಿ ಉತ್ಪಾದನೆಗೆ ಒತ್ತಾಯಿಸುತ್ತಾ ಬಂದಿದೆ. ಕೇಂದ್ರ ಸರ್ಕಾರವು ಆತ್ಮ ನಿರ್ಭರ ಭಾರತ ಯೋಜನೆಯಡಿ ಸ್ವದೇಶಿ ರಕ್ಷಣಾ ವಸ್ತು, ತಂತ್ರಜ್ಞಾನಗಳ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸಿದೆ. 

ಲಘು ಯುದ್ಧ ವಿಮಾನವಾದ ತೇಜಸ್ ನ್ನು ಖರೀದಿಸಲು ಹಲವಾರು ದೇಶಗಳು ಆಸಕ್ತಿ ತೋರಿಸಿವೆ. ಅಮೆರಿಕಾ ರಕ್ಷಣಾ ದೈತ್ಯ ಜಿಇ ಏರೋಸ್ಪೇಸ್ ಎಂಕೆ-II-ತೇಜಸ್‌ಗಾಗಿ ಜಂಟಿಯಾಗಿ ಎಂಜಿನ್‌ಗಳನ್ನು ಉತ್ಪಾದಿಸಲು ಹೆಚ್ ಎಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

2022-2023ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ 15,920 ಕೋಟಿ ರೂಪಾಯಿಗೆ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವರ್ಷದ ಏಪ್ರಿಲ್‌ನಲ್ಲಿ ಹೇಳಿದ್ದರು. ಇದು ದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com