ಕೊಚ್ಚಿ ಯೂನಿವರ್ಸಿಟಿ ಫೆಸ್ಟ್‌ನಲ್ಲಿ ಕಾಲ್ತುಳಿತ; 4 ವಿದ್ಯಾರ್ಥಿಗಳು ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ; ತನಿಖೆಗೆ ಆದೇಶ

ಕೊಚ್ಚಿ ವಿಶ್ವವಿದ್ಯಾನಿಲಯದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ತನಿಖೆಗೆ ಕೇರಳ ಸರ್ಕಾರ ಶನಿವಾರ ಆದೇಶಿಸಿದೆ.
ಕೊಚ್ಚಿ ವಿಶ್ವವಿದ್ಯಾಲಯದ ಉತ್ಸವದ ವೇಳೆ ಕಾಲ್ತುಳಿತ
ಕೊಚ್ಚಿ ವಿಶ್ವವಿದ್ಯಾಲಯದ ಉತ್ಸವದ ವೇಳೆ ಕಾಲ್ತುಳಿತ
Updated on

ಕೊಚ್ಚಿ: ಕೊಚ್ಚಿ ವಿಶ್ವವಿದ್ಯಾನಿಲಯದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ತನಿಖೆಗೆ ಕೇರಳ ಸರ್ಕಾರ ಶನಿವಾರ ಆದೇಶಿಸಿದೆ.

ಉನ್ನತ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಮತ್ತು ಕೊಚ್ಚಿನ್ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ರಿಜಿಸ್ಟ್ರಾರ್ ಅವರನ್ನು ಒಳಗೊಂಡ ಮೂವರು ಸದಸ್ಯರ ತಂಡಕ್ಕೆ ಕಾಲ್ತುಳಿತದ ಘಟನೆಯ ಕುರಿತು ತನಿಖೆ ನಡೆಸಲು ರಾಜ್ಯ ಉನ್ನತ ಶಿಕ್ಷಣ ಸಚಿವ ಆರ್ ಬಿಂಧು ನಿರ್ದೇಶಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖ್ಯಾತ ಗಾಯಕಿ ನಿಕಿತಾ ಗಾಂಧಿ ಅವರು ಕೊಚ್ಚಿ ಬಳಿಯ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಸಿಯುಎಸ್‌ಎಟಿ) ತೆರೆದ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೊದಲು ಕಾಲ್ತುಳಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಲ್ತುಳಿತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯರು ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಗಾಯಗೊಂಡ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಮಸ್ಸೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಹತ್ತಿರದ ಇತರ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ನಾಲ್ವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಘಟನೆ ನಂತರ ಗಾಯಕಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೊರಡುವ ಮುನ್ನವೇ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. 'ಈ ಆಳವಾದ ದುಃಖವನ್ನು ವ್ಯಕ್ತಪಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ವಿದ್ಯಾರ್ಥಿಗಳ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು ಸಲ್ಲುತ್ತವೆ' ಎಂದಿದ್ದಾರೆ. 

'ಏಕಾಏಕಿ ಮಳೆ ಆರಂಭವಾದಾಗ ಪ್ರೇಕ್ಷಕರು ಮೆಟ್ಟಿಲುಗಳನ್ನು ಬಳಸಿ ಸಭಾಂಗಣಕ್ಕೆ ಧಾವಿಸಿದರು. ಇದು ಕಾಲ್ತುಳಿತಕ್ಕೆ ಕಾರಣವಾಯಿತು ಮತ್ತು ನಂತರದ ಸಾವುಗಳಿಗೆ ಕಾರಣವಾಯಿತು' ಎಂದು ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ಹೇಳಿದ್ದಾರೆ.

'ಇದು ವಾರ್ಷಿಕ ಉತ್ಸವವಾಗಿತ್ತು ಮತ್ತು ಬ್ರೋಷರ್‌ನಿಂದ, ಇದು ನವೆಂಬರ್ 24 ರಿಂದ ನವೆಂಬರ್ 26ರವರೆಗೆ ಹಮ್ಮಿಕೊಳ್ಳಲಾಗಿತ್ತು ಎಂಬುದು ನಮಗೆ ತಿಳಿದುಬಂದಿದೆ. ಸಂಗೀತ ಕಾರ್ಯಕ್ರಮವನ್ನು 1,000 ರಿಂದ 1,500 ಜನರ ಸಾಮರ್ಥ್ಯವಿರುವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು' ಎಂದರು.

'ಸಭಾಂಗಣ ಭಾಗಶಃ ತುಂಬಿದೆ. ಆದರೆ, ಏಕಾಏಕಿ ಮಳೆ ಸುರಿದಾಗ ವಿದ್ಯಾರ್ಥಿಗಳು ಮೆಟ್ಟಿಲುಗಳ ಮೂಲಕ ನುಗ್ಗಿದ್ದು ದುರಂತಕ್ಕೆ ಕಾರಣವಾಯಿತು' ಎಂದು ಕುಮಾರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನಿಕಿತಾ ಗಾಂಧಿ ಸಂಗೀತ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ಆರಂಭಿಕ ವರದಿಗಳು ಸೂಚಿಸಿದರೆ, ದುರಂತ ಸಂಭವಿಸಿದಾಗ ಗಾಯಕಿ ತನ್ನ ಪ್ರದರ್ಶನವನ್ನು ಪ್ರಾರಂಭಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com