ಗುಜರಾತ್: ಬುಡಕಟ್ಟು ಮಹಿಳೆಯನ್ನು ಅಪಹರಿಸಿ, ಥಳಿತ; ಅರೆಬೆತ್ತಲೆಗೊಳಿಸಿದ ಪ್ರಿಯಕರನ ಕುಟುಂಬ

ಗುಜರಾತ್‌ನ ತಾಪಿ ಜಿಲ್ಲೆಯ ವ್ಯಾರಾ ಪಟ್ಟಣದಲ್ಲಿ ವಾಸಿಸುತ್ತಿದ್ದ ವಿಚ್ಛೇದಿತ ಬುಡಕಟ್ಟು ಮಹಿಳೆಯನ್ನು ಆಕೆಯ ಪ್ರಿಯಕರನ ಕುಟುಂಬದವರೇ ಅಪಹರಿಸಿ, ಥಳಿಸಿ, ಅರೆಬೆತ್ತಲೆಗೊಳಿಸಿ ರಸ್ತೆಬದಿಯಲ್ಲಿ ಬಿಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಅಹಮದಾಬಾದ್: ಗುಜರಾತ್‌ನ ತಾಪಿ ಜಿಲ್ಲೆಯ ವ್ಯಾರಾ ಪಟ್ಟಣದಲ್ಲಿ ವಾಸಿಸುತ್ತಿದ್ದ ವಿಚ್ಛೇದಿತ ಬುಡಕಟ್ಟು ಮಹಿಳೆಯನ್ನು ಆಕೆಯ ಪ್ರಿಯಕರನ ಕುಟುಂಬದವರೇ ಅಪಹರಿಸಿ, ಥಳಿಸಿ, ಅರೆಬೆತ್ತಲೆಗೊಳಿಸಿ ರಸ್ತೆಬದಿಯಲ್ಲಿ ಬಿಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

26 ವರ್ಷದ ಸಂತ್ರಸ್ತ ಮಹಿಳೆಗೆ ಹತ್ತು ವರ್ಷದ ಮಗನಿದ್ದಾನೆ. ಎಂಟು ವರ್ಷಗಳ ಹಿಂದೆ ಆಕೆ ವಿಚ್ಛೇದನ ಪಡೆದಿದ್ದರು ಮತ್ತು ಅಂದಿನಿಂದ ಒಂಟಿಯಾಗಿ ವಾಸಿಸುತ್ತಿದ್ದರು.

ಪೊಲೀಸರ ಪ್ರಕಾರ, ಒಂದೂವರೆ ವರ್ಷಗಳ ಹಿಂದೆ, ಆಕೆ ಬೋರಖಡಿ ಗ್ರಾಮದ ನಿವಾಸಿ ನೀರವ್ ಚೌಧರಿ ಎಂಬಾತನನ್ನು ಪ್ರೀತಿಸುತ್ತಿದ್ದಳು ಮತ್ತು ಕಳೆದ ವಾರದಿಂದ ಇಬ್ಬರೂ ವ್ಯಾರಾ ಪಟ್ಟಣದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಈ ಬಗ್ಗೆ ನೀರವ್ ಚೌಧರಿ ಅವರ ಪೋಷಕರು ಮತ್ತು ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. 

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಬುಧವಾರ ಮಧ್ಯಾಹ್ನ, ಸಂತ್ರಸ್ತೆಯು ಚೌಧರಿ ಮತ್ತು ತನ್ನ ಸ್ನೇಹಿತೆ ಪ್ರಿತಿಕಾಬೆನ್ ಅವರೊಂದಿಗೆ ಕೆಲವು ವೈಯಕ್ತಿಕ ಕೆಲಸಕ್ಕಾಗಿ ಬುಹಾರಿ ಗ್ರಾಮಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಅವರು ತೆರಳುತ್ತಿದ್ದಾಗ ಚೌಧರಿ ಅವರ ಪೋಷಕರಾದ ಸುನೀತಾಬೆನ್ ಮತ್ತು ಅಜಿತ್‌ಭಾಯ್, ಸ್ನೇಹಲ್‌ಭಾಯ್ ಮತ್ತು ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಕಪುರ ಚೌಕದ ಬಳಿ ತಡೆದಿದ್ದಾರೆ. ಆ ನಾಲ್ವರೂ ದ್ವಿಚಕ್ರ ವಾಹನದಲ್ಲಿ ಬಂದಿದ್ದರು.

ಈ ವೇಳೆ ಸುನೀತಾಬೆನ್ ಮತ್ತು ಅಜಿತಭಾಯಿ ತಮ್ಮ ಮಗನನ್ನು (ಚೌಧರಿ) ಕರೆದುಕೊಂಡು ಸ್ಥಳದಿಂದ ತೆರಳಿದ್ದಾರೆ. ಬಳಿಕ ಸ್ನೇಹಲ್‌ಭಾಯ್ ಮತ್ತು ನಾಲ್ಕನೇ ವ್ಯಕ್ತಿ ಸಂತ್ರಸ್ತೆಯನ್ನು ತಮ್ಮೊಂದಿಗೆ ಬರಲು ಹೇಳಿದ್ದಾರೆ ಮತ್ತು ವ್ಯಾರಾದಲ್ಲಿರುವ ಆಕೆಯ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ ಆಕೆಯನ್ನು ಖುಶಾಲ್ಪುರ ಗ್ರಾಮಕ್ಕೆ ಕರೆದೊಯ್ದಿದ್ದಾರೆ. ಅಷ್ಟೊತ್ತಿಗಾಗಲೇ ಚೌಧರಿಯ ಪೋಷಕರು ಅಲ್ಲಿದ್ದರು. ಕೂಡಲೇ ಸಂತ್ರಸ್ತೆಯನ್ನು ಚೌಧರಿಯ ಪೋಷಕರು ನಿಂದಿಸಿದರು ಮತ್ತು ಕೋಲಿನಿಂದ ಥಳಿಸಿದರು.

ಇದಲ್ಲದೆ, ಪ್ರಿಯಕರನ ತಾಯಿ ಸುನಿತಾಬೆನ್, ಕತ್ತರಿಯಿಂದ ಸಂತ್ರಸ್ತೆಯ ಕೂದಲನ್ನು ಕತ್ತರಿಸಿದ್ದಾರೆ ಮತ್ತು ಆಕೆ ಧರಿಸಿದ್ದ ಜೀನ್ಸ್ ಅನ್ನು ಕತ್ತರಿಸಿ ಅರೆಬೆತ್ತಲೆ ಮಾಡಿದ್ದಾರೆ. ಇನ್ಮುಂದೆ ತನ್ನ ಮಗನೊಂದಿಗೆ ಸಂಬಂಧ ಮುಂದುವರಿಸಿದರೆ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆ ತನಗಾದ ಸಂಕಟವನ್ನು ಮತ್ತು ತಾನಿರುವ ಸ್ಥಳವನ್ನು ಫೋನ್ ಮೂಲಕ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ಆಕೆಯನ್ನು ರಕ್ಷಿಸಲಾಗಿದೆ.

ಬಳಿಕ ಸಂತ್ರಸ್ತೆ ವ್ಯಾರಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಂತರ, ಚೌಧರಿ ಅವರ ಪೋಷಕರು, ಸ್ನೇಹಲಭಾಯ್ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆ, ಮಹಿಳೆಯ ಮಾನಹಾನಿ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಪ್ರಕರಣವನ್ನು ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com