ಸಂಸತ್ತಿನ ಚಳಿಗಾಲದ ಅಧಿವೇಶನ: ಡಿಸೆಂಬರ್ 2ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ಡಿಸೆಂಬರ್ 4 ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸರ್ಕಾರವು ಡಿಸೆಂಬರ್ 2ರಂದು ಸರ್ವಪಕ್ಷ ಸಭೆ ಕರೆದಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 22ರಂದು ಮುಕ್ತಾಯಗೊಳ್ಳಲಿದೆ.
ನೂತನ ಸಂಸತ್ ಭವನ
ನೂತನ ಸಂಸತ್ ಭವನ

ನವದೆಹಲಿ: ಡಿಸೆಂಬರ್ 4 ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸರ್ಕಾರವು ಡಿಸೆಂಬರ್ 2ರಂದು ಸರ್ವಪಕ್ಷ ಸಭೆ ಕರೆದಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 22ರಂದು ಮುಕ್ತಾಯಗೊಳ್ಳಲಿದೆ.
ಸರ್ಕಾರದ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಡಿಸೆಂಬರ್ 2 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.

ಸರ್ವಪಕ್ಷಗಳ ಸಭೆಯನ್ನು ಸಾಮಾನ್ಯವಾಗಿ ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ಕರೆಯಲಾಗುತ್ತಿತ್ತು. ಆದರೆ, ಈ ಬಾರಿ ಪಂಚ ರಾಜ್ಯಗಳ ಚುನಾವಣಾ ಮತ ಎಣಿಕೆ ಡಿಸೆಂಬರ್ 3ರಂದು ನಡೆಯುತ್ತಿರುವುದರಿಂದ ಡಿಸೆಂಬರ್ 2ರಂದೇ ಸರ್ವಪಕ್ಷ ಸಭೆ ಕರೆಯಲಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ (ಡಿ. 4) ಚಳಿಗಾಲದ ಅಧಿವೇಶನ ನಡೆಯಲಿದೆ. ಚುನಾವಣೆಯ ಫಲಿತಾಂಶವು ಅಧಿವೇಶನದಲ್ಲಿ ಪ್ರತಿಧ್ವನಿಸುವ ನಿರೀಕ್ಷೆಯಿದೆ.

ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಕಾಯ್ದೆಯನ್ನು ಬದಲಿಸಲು ಬಯಸುವ ಮೂರು ಪ್ರಮುಖ ಮಸೂದೆಗಳನ್ನು ಅಧಿವೇಶನದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಉತ್ಸುಕವಾಗಿದೆ. 

ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ 'ಪ್ರಶ್ನೆಗಾಗಿ ನಗದು' ಆರೋಪದ ಕುರಿತು ನೈತಿಕ ಸಮಿತಿಯ ವರದಿಯನ್ನು ಸಹ ಅಧಿವೇಶನದಲ್ಲಿ ಚರ್ಚಿಸುವ ಸಾಧ್ಯತೆಯಿದೆ. ನೈತಿಕ ಸಮಿತಿಯು ಮಹುವಾ ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡಿದೆ. ಸಮಿತಿ ಶಿಫಾರಸು ಮಾಡಿದ ಉಚ್ಛಾಟನೆ ಜಾರಿ ಬರಲು ಸದನವು ವರದಿಯನ್ನು ಅಂಗೀಕರಿಬೇಕಿದೆ.

ಸರ್ಕಾರವು ತನ್ನ ಶಾಸಕಾಂಗ ಕಾರ್ಯಸೂಚಿಯನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದರೆ, ವಿರೋಧ ಪಕ್ಷಗಳು ಇತರೆ ವಿಷಯಗಳ ಬಗ್ಗೆ ಚರ್ಚೆಗೆ ಒತ್ತಾಯಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com