ಕಾವೇರಿ ಜಲ ವಿವಾದ: 'ಡಿಎಂಕೆ ಸರ್ಕಾರ ಗಾಢ ನಿದ್ರೆಯಲ್ಲಿದೆ'; ಎಂಕೆ ಸ್ಟಾಲಿನ್ ವಿರುದ್ಧ ಎಡಪ್ಪಾಡಿ ಕೆ ಪಳನಿಸ್ವಾಮಿ ಕಿಡಿ 

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಭಾನುವಾರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಈ ವಿಚಾರದಲ್ಲಿ ರಾಜ್ಯದ ಜನರ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಎಡಪ್ಪಾಡಿ ಕೆ ಪಳನಿಸ್ವಾಮಿ
ಎಡಪ್ಪಾಡಿ ಕೆ ಪಳನಿಸ್ವಾಮಿ

ಚೆನ್ನೈ: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಭಾನುವಾರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಈ ವಿಚಾರದಲ್ಲಿ ರಾಜ್ಯದ ಜನರ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ತನ್ನ ಕುಟುಂಬ ಸದಸ್ಯರು ನಡೆಸುತ್ತಿರುವ ವ್ಯವಹಾರಗಳಿಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಡಿಎಂಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸುತ್ತಿದೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರೋಪಿಸಿದ್ದಾರೆ.

'ಪಪೆಟ್ ಸಿಎಂ ಸ್ಟಾಲಿನ್'ಗೆ ಯಾವುದೇ ದೂರದೃಷ್ಟಿ ಇಲ್ಲ. ಅವರು ಜೂನ್ 12 ರಂದು ಸೇಲಂನ ಮೆಟ್ಟೂರು ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಭರವಸೆಯನ್ನು ನಂಬಿ ಕಾವೇರಿ ನದಿ ಮುಖಜ ಭೂಮಿಯಲ್ಲಿ ಸುಮಾರು 1.50 ಲಕ್ಷ ರೈತರು 5 ಲಕ್ಷ ಎಕರೆ ಜಮೀನಿನಲ್ಲಿ ಅಲ್ಪಾವಧಿ ‘ಕುರುವಾಯಿ’ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂದರು.

ಆದರೆ, ಈಗ 3.50 ಲಕ್ಷ ಎಕರೆಯಲ್ಲಿನ ಬೆಳೆಗಳು ಒಣಗಿ ಹೋಗಿದ್ದು, ಉಳಿದ ಭಾಗಕ್ಕೆ ಬಾವಿ ನೀರನ್ನು ಹರಿಸಲಾಗುತ್ತಿದೆ. ‘ದಕ್ಷ ಆಡಳಿತದ ಕೊರತೆಯಿರುವ ಡಿಎಂಕೆ ಸರ್ಕಾರ ಏನು ಮಾಡಬೇಕಿತ್ತು ಎಂದರೆ, ಮೆಟ್ಟೂರು ಅಣೆಕಟ್ಟಿನಿಂದ ಬಿಡುವ ನೀರಿನ ಪ್ರಮಾಣವನ್ನು ಕಡಿತಗೊಳಿಸಿ, ಕಾನೂನಿನ ಪ್ರಕಾರ ಮತ್ತು ರಾಜಕೀಯ ಒತ್ತಡ ಹೇರಿ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿಗೆ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರಿನ ಪಾಲನ್ನು ಕೇಳಬೇಕಿತ್ತು ಎಂದು ಅವರು ಹೇಳಿದರು.

ಡಿಎಂಕೆ ಸರ್ಕಾರವು 'ಗಾಢ ನಿದ್ರೆ'ಯಲ್ಲಿತ್ತು, ಮೆಟ್ಟೂರು ಅಣೆಕಟ್ಟಿನ ನೀರನ್ನು ಬಳಸಿಕೊಂಡಿತು. ಇದಕ್ಕಾಗಿ ಕೇಂದ್ರದತ್ತ ಬೆರಳು ಮಾಡಿ ತೋರಿಸಿತು. ಆದರೆ, ಈ ವಿಷಯದಲ್ಲಿ ರಚನಾತ್ಮಕವಾಗಿ ಏನನ್ನೂ ಮಾಡಲಿಲ್ಲ. ಸ್ಟಾಲಿನ್‌ಗೆ ಕಾವೇರಿ ನದಿ ಮುಖಜ ಭೂಮಿ ಸೇರಿದಂತೆ ರಾಜ್ಯದ ಜನರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೋದಾಗ ಈ ವಿಷಯವನ್ನು ಅವರಿಗೆ ತಿಳಿಸಬಹುದಿತ್ತು ಎಂದು ಮಾಜಿ ಸಿಎಂ ಹೇಳಿದರು.

ಆಗ ಸೌಹಾರ್ದಯುತ ಮಾತುಕತೆ ನಡೆಸಿ, ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಿರುವಾಗ ನೀರು ಬಿಡುಗಡೆ ಮಾಡಿಸಿಕೊಳ್ಳಬಹುದಿತ್ತು. ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಮುಂದುವರಿಯಬೇಕಾದರೆ ಕಾವೇರಿ ನೀರು ಬಿಡುಗಡೆ ಮಾಡಬೇಕು ಎಂಬ ಷರತ್ತನ್ನು ಸ್ಟಾಲಿನ್ ಅವರು ಹಾಕಬಹುದಿತ್ತು ಎಂದರು. 

ಈ ಸರ್ಕಾರ ಈಗಲಾದರೂ ರೈತರ ಬಗ್ಗೆ ಕಾಳಜಿ ತೋರಬೇಕು. ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ ಹಕ್ಕಿಗಾಗಿ ಸರ್ವಪಕ್ಷ ಸಭೆ ಕರೆಯಬೇಕು ಮತ್ತು ರಾಜ್ಯಕ್ಕೆ ನೀರು ಹರಿಸುವತ್ತ ದೃಢ ಹೆಜ್ಜೆ ಇಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com