ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಟಾ ಹಾಸ್ಟೆಲ್‌ನಲ್ಲಿ ನೀಟ್ ಆಕಾಂಕ್ಷಿ ಮೇಲೆ ನಿರಂತರ ಅತ್ಯಾಚಾರ

ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ 15 ವರ್ಷದ NEET ಆಕಾಂಕ್ಷಿ ವಿದ್ಯಾರ್ಥಿನಿ ಅತ್ಯಾಚಾರವಾದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಜೈಪುರ: ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ 15 ವರ್ಷದ NEET ಆಕಾಂಕ್ಷಿ ವಿದ್ಯಾರ್ಥಿನಿ ಅತ್ಯಾಚಾರವಾದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

15 ವರ್ಷದ NEET ಆಕಾಂಕ್ಷಿ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವಕ ಮತ್ತು ಹಾಸ್ಟೆಲ್ ಮಾಲೀಕನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಸಹೋದರಿಯೊಂದಿಗೆ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಬಿಹಾರದ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ಮಂಗಳವಾರ ನೀಡಿದ ದೂರಿನಲ್ಲಿ ಟಿಫಿನ್ ಹುಡುಗ ತನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾನೆ. ಆದರೆ ಹಾಸ್ಟೆಲ್ ಮಾಲೀಕರು ಘಟನೆಯನ್ನು ಬಹಿರಂಗಪಡಿಸದಂತೆ ಎಚ್ಚರಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ಬಗ್ಗೆ  ಕೋಟಾ ನಗರ ಪೊಲೀಸ್ ವರಿಷ್ಠಾಧಿಕಾರಿ ಶರದ್ ಚೌಧರಿ ಮಾಹಿತಿ ನೀಡಿದ್ದು, ಸಂತ್ರಸ್ಥ ಯುವತಿ ನೀಡಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ದೂರಿನಲ್ಲಿರುವಂತೆ ಆರೋಪಿ ಯುವಕ ಯುವತಿಗೆ ಆಹಾರ ನೀಡಲು ಹಾಸ್ಟೆಲ್ ಗೆ ಆಗಮಿಸುತ್ತಿದ್ದ. ಹೀಗೆ ಫೆಬ್ರವರಿಯಲ್ಲಿ ಯುವತಿಯೊಂದಿಗೆ ಪರಿಚಯ ಮಾಡಿಕೊಂಡು ಪರಿಚಯದ ಲಾಭ ಪಡೆದುಕೊಂಡು ಆಕೆಗೆ ಮದ್ಯಪಾನ ಮಾಡಿಸಿ ಆಕೆಗೆ ಅಮಲೇರಿದ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ತನ್ನ ಈ ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಯಾರಿಗಾದರೂ ಬಹಿರಂಗ ಪಡಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದೇ ವಿಡಿಯೋ ತೋರಿಸಿ ಬೆದರಿಸಿ ಸುಮಾರು 7 ಬಾರಿ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ಈ ಬಗ್ಗೆ ಸಂತ್ರಸ್ಥ ಯುವತಿ ಹಾಸ್ಟೆಲ್ ಮಾಲಿಕರಿಗೆ ತಿಳಿಸಿದಾಗ ಅವರು ಆಕೆಯನ್ನು ವಿಷಯ ಬಹಿರಂಗ ಪಡಿಸದಂತೆ ಹೇಳಿದ್ದರು. ಅಲ್ಲದೆ ಅತ್ಯಾಚಾರ ಮಾಡಿದ್ದ ಯುವಕನೊಂದಿಗೇ ಮದುವೆ ಮಾಡಿಕೊಳ್ಳಲು ಮನವೊಲಿಸಲು ಪ್ರಯತ್ನಿಸಿದರು. ಆಕೆ ಅದಕ್ಕೆ ನಿರಾಕರಿಸಿದಾಗ ಯುವತಿಗೆ ಅವರೂ ಕೂಡ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ಥ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ), ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಬಾಲಾಪರಾಧ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಸೆಕ್ಷನ್‌ಗಳ ಅಡಿಯಲ್ಲಿ ಟಿಫಿನ್ ಹುಡುಗನ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣ ದಾಖಲಿಸಿದ್ದಾರೆ.

ಅಂತೆಯೇ ಹಾಸ್ಟೆಲ್ ಮಾಲೀಕರ ವಿರುದ್ಧ ಐಪಿಸಿ, ಪೋಕ್ಸೊ ಕಾಯ್ದೆ ಮತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪಿತೂರಿಗಾಗಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಚೌಧರಿ ತಿಳಿಸಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com