ಗಾಜಾ ಮೇಲೆ ಇಸ್ರೇಲ್‌ ಆಕ್ರಮಣ ಖಂಡಿಸಿ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ಪ್ರತಿಭಟನೆ

ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆ ಖಂಡಿಸಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ(ಪಿಡಿಪಿ)ದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ನೇತೃತ್ವದಲ್ಲಿ ಪಿಡಿಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ

ಶ್ರೀನಗರ: ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆ ಖಂಡಿಸಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ(ಪಿಡಿಪಿ)ದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ನೇತೃತ್ವದಲ್ಲಿ ಪಿಡಿಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಮುಫ್ತಿ ಮತ್ತು ಪಿಡಿಪಿ ಕಾರ್ಯಕರ್ತರು ಇಲ್ಲಿನ ಶೇರ್-ಎ-ಕಾಶ್ಮೀರ್ ಪಾರ್ಕ್ ಬಳಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಜಮಾಯಿಸಿ, ಲಾಲ್ ಚೌಕ್ ನಗರದ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಆದರೆ ಜನರಲ್ ಪೋಸ್ಟ್ ಆಫೀಸ್(ಜಿಪಿಒ) ಬಳಿ ಪೋಲಿಸರು ಅವರನ್ನು ತಡೆದರು.

ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ಯಾಲೆಸ್ತೀನ್ ಧ್ವಜವನ್ನು ಹಿಡಿದುಕೊಂಡಿದ್ದರೆ, ಪ್ರತಿಭಟನಾಕಾರರು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ, ಪ್ಯಾಲೆಸ್ತೀನ್‌ನಲ್ಲಿ ಇದುವರೆಗೆ ಸುಮಾರು 1,500 ಮಕ್ಕಳು ಮತ್ತು ಸಾವಿರಾರು ಅಮಾಯಕರು ಸಾವನ್ನಪ್ಪಿದ್ದಾರೆ. ಆದರೆ ಇಡೀ ಜಗತ್ತು ಇದನ್ನು ಮೂಕ ಪ್ರೇಕ್ಷಕನಾಗಿ ನೋಡುತ್ತಿದೆ ಎಂದರು.

"ಉಕ್ರೇನ್‌ನಲ್ಲಿ ಎರಡು ವರ್ಷಗಳಲ್ಲಿ 500 ಮಕ್ಕಳು ಸಾವನ್ನಪ್ಪಿದಾಗ, ಇಡೀ ಜಗತ್ತು ತೀವ್ರ ಕಳವಳ ವ್ಯಕ್ತಪಡಿಸಿತು. ಆದರೆ ಇಂದು ಯಾರೂ ಮಾತನಾಡುತ್ತಿಲ್ಲ" ಎಂದು ಮಾಜಿ ಸಿಎಂ ಹೇಳಿದರು.

ಈ ಸಂಘರ್ಷವು ವಿಶ್ವದಾದ್ಯಂತ ಭಯೋತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ಮುಫ್ತಿ, ಪ್ಯಾಲೆಸ್ತೀನ್‌ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಆಹಾರ, ನೀರು ಮತ್ತು ಔಷಧಿಗಳ ಪೂರೈಕೆ ನಿಲ್ಲಿಸಲಾಗಿದೆ. ಜನರ ಮೇಲೆ ದಾಳಿ ಮಾಡಲಾಗುತ್ತಿದೆ. ಹತ್ಯಾಕಾಂಡದಲ್ಲಿ ಯಹೂದಿಗಳಿಗೆ ಮಾಡಿದ್ದನ್ನು ಇಸ್ರೇಲ್ ಈಗ ಪ್ಯಾಲೆಸ್ತೀನ್‌ಗೆ ಮಾಡುತ್ತಿದೆ ಮತ್ತು ಅದರ ಪರಿಣಾಮಗಳು ಮುಂಬರುವ ದಿನಗಳಲ್ಲಿ ಬಹಳ ಗಂಭೀರವಾಗಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com