ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನಷ್ಟೇ ಬಳಸುತ್ತೇನೆ: ನಿತಿನ್ ಗಡ್ಕರಿ

ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದಾಗಿ ಮತ್ತು ಜಾಹೀರಾತು ಬ್ಯಾನರ್‌ಗಳನ್ನು ಬಳಸುವುದಿಲ್ಲ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ

ನಾಗ್ಪುರ: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದಾಗಿ ಮತ್ತು ಜಾಹೀರಾತು ಬ್ಯಾನರ್‌ಗಳನ್ನು ಬಳಸುವುದಿಲ್ಲ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.

ಸಮಾಜದ ಉನ್ನತಿಗಾಗಿ ಮಾಡಿದ ಕೆಲಸ ಹಾಗೂ ಡೌನ್ ಟು ಅರ್ಥ್ ಧೋರಣೆ ತಮ್ಮ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಮೊಬೈಲ್ ನೆಟ್‌ವರ್ಕ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನರ ಆಶೀರ್ವಾದ ಪಡೆಯುತ್ತೇನೆ ಎಂದರು.

'ಮತದಾರರು ಬುದ್ಧಿವಂತರು. ಗಂಡ ಒಂದು ಪಕ್ಷಕ್ಕೆ ಮತ ಹಾಕಿದರೆ, ಹೆಂಡತಿ ಇನ್ನೊಂದು ಪಕ್ಷಕ್ಕೆ ಮತ ಹಾಕುತ್ತಾರೆ. ಆದರೆ, ಅವರು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಉಡುಗೊರೆಗಳು ಮತ್ತು ಪ್ರಯೋಜನಗಳನ್ನು ಸ್ವೀಕರಿಸುತ್ತಾರೆ' ಎಂದು ಗಡ್ಕರಿ ಖ್ಯಾತ ಮರಾಠಿ ನಟ ಪ್ರಶಾಂತ್ ದಾಮ್ಲೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಿ ಮತ ಯಾಚಿಸಿ, ಅಭಿವೃದ್ಧಿಗಾಗಿ ಮಾಡಿದ ಉತ್ತಮ ಕೆಲಸಗಳನ್ನು ಅವರ ಮುಂದಿಡುತ್ತೇನೆ. ತಮ್ಮ ಕುಟುಂಬದವರು ತನ್ನ ರಾಜಕೀಯ ವಾರಸುದಾರರಲ್ಲ ಎಂದರು.

'ನನ್ನ ಬೆಂಬಲಿಗರೇ ನನ್ನ ನಿಜವಾದ ರಾಜಕೀಯ ಆಸ್ತಿಯೇ ಹೊರತು ನನ್ನ ಕುಟುಂಬದವರಲ್ಲ. ಖಂಡಿತ ನನ್ನ ಭೌತಿಕ ಆಸ್ತಿ ಕುಟುಂಬ ಸದಸ್ಯರಿಗೆ ಸೇರುತ್ತದೆ. ಹಿರಿಯ ಮಗನನ್ನು ಪಕ್ಷದ ಪದಾಧಿಕಾರಿಯನ್ನಾಗಿ ಮಾಡುವಂತೆ ಪಕ್ಷದ ಸಹೋದ್ಯೋಗಿಗಳು ನೀಡಿದ ಸಲಹೆಯನ್ನು ನಯವಾಗಿ ತಿರಸ್ಕರಿಸಿದ್ದೇನೆ' ಎಂದು ಹೇಳಿದರು.

'ನನ್ನ ಮಗ ನನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ನಾನು ಅನುಮತಿ ನೀಡುವುವುದಿಲ್ಲ' ಎಂದ ಅವರು, ತಮ್ಮ ಯೌವನದ ದಿನಗಳಲ್ಲಿ 'ಡ್ರೀಮ್ ಗರ್ಲ್' ಹೇಮಾ ಮಾಲಿನಿ ಅವರನ್ನು ಮದುವೆಯಾಗುವ ಕನಸು ಕಾಣುತ್ತಿದ್ದದ್ದಾಗಿ ಬಹಿರಂಗಪಡಿಸಿದರು.

'ಸಚಿವರಾದ ನಂತರ, ಒಂದು ದಿನ ಹೇಮಾ ಮಾಲಿನಿ ಅವರು ನಮ್ಮ ಮನೆಗೆ ಭೇಟಿ ನೀಡಿದಾಗ, ನಾನು ನನ್ನ ಕನಸನ್ನು ಅವರ ಮುಂದಿಟ್ಟೆ. ನನಗೆ ಆಶ್ಚರ್ಯವಾಗುವಂತೆ, ಹೇಮಾ ಮಾಲಿನಿ ಅವರು ತನ್ನ ನಿರ್ಧಾರವನ್ನು ಪರಿಗಣಿಸುವುದಾಗಿ ಹೇಳಿದರು. ಆದರೆ, ಆ ದಿನಗಳಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ನನಗೂ ತಿಳಿದಿತ್ತು. ಈಗ ನಾನು ನನ್ನ ಹೆಂಡತಿಯನ್ನೇ ಹೇಮಾ ಮಾಲಿನಿ ಎಂದು ಪರಿಗಣಿಸಿದ್ದೇನೆ. ಆದರೆ, ನನ್ನ ನೆಚ್ಚಿನ ನಾಯಕಿ ಯಾವಾಗಲೂ ರೇಖಾ ಎಂದರು.

ರಸ್ತೆಬದಿಯ ಲಘು ಆಹಾರಗಳನ್ನು ತಿನ್ನಲು ನಾನು ಇಂದಿಗೂ ಇಷ್ಟಪಡುತ್ತೇನೆ ಎಂದು ಗಡ್ಕರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com