ಜಾರ್ಖಂಡ್: ದುರ್ಗಾ ಮಾತೆಯ ವಿಗ್ರಹ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಉರುಳಿ ಇಬ್ಬರು ಸಾವು, 4 ಮಂದಿಗೆ ಗಾಯ

ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ದುರ್ಗಾ ಮಾತೆಯ ವಿಗ್ರಹದ ವಿಸರ್ಜನೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ಜನರ ಮೇಲೆ ಟ್ರಕ್ ಉರುಳಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರ್ಗಾ ಮಾತೆ ವಿಗ್ರಹ ವಿಸರ್ಜನೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ಜನರ ಮೇಲೆ ಉರುಳಿದ ಟ್ರಕ್
ದುರ್ಗಾ ಮಾತೆ ವಿಗ್ರಹ ವಿಸರ್ಜನೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ಜನರ ಮೇಲೆ ಉರುಳಿದ ಟ್ರಕ್

ಜೆಮ್‌ಶೆಡ್‌ಪುರ: ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ದುರ್ಗಾ ಮಾತೆಯ ವಿಗ್ರಹದ ವಿಸರ್ಜನೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ಜನರ ಮೇಲೆ ಟ್ರಕ್ ಉರುಳಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಬಿಸ್ತುಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೋಧನ್‌ವಾಲಾ ಘಾಟ್‌ನಲ್ಲಿ ಟ್ರಕ್ ಇಳಿಜಾರಿನಲ್ಲಿ ನಿಂತಿದ್ದಾಗ ಜನರ ಮೇಲೆ ಉರುಳಿ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ಟಾಟಾ ಮುಖ್ಯ ಆಸ್ಪತ್ರೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ನಾಲ್ವರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸಂತ್ರಸ್ತರು ಬಾಗ್ಬೇರಾದ ಕಿತಾದಿ ಪೂಜಾ ಸಮಿತಿಯ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.

ಈಸ್ಟ್ ಸಿಂಗ್‌ಭೂಮ್‌ನ ಸಿವಿಲ್ ಸರ್ಜನ್ ಡಾ. ಜುಜಾರ್ ಮಾಝಿ ಮತ್ತು ಆಸ್ಪತ್ರೆಯ ಅಧಿಕಾರಿಗಳಿಗೆ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಗುಪ್ತಾ ಸೂಚಿಸಿದರು. 

ಇಬ್ಬರ ಸಾವಿಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಂತಾಪ ಸೂಚಿಸಿದ್ದಾರೆ.

ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಮೃತರ ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಜಿಲ್ಲಾಡಳಿತದಿಂದ ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದರು.

ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ಭಕ್ತರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

200ಕ್ಕೂ ಹೆಚ್ಚು ಸಮುದಾಯದ ದುರ್ಗಾ ಪೂಜೆ ಸಮಿತಿಗಳು ಕೈಗೊಂಡ ವಿಗ್ರಹ ವಿಸರ್ಜನೆ ಮೆರವಣಿಗೆಗಳನ್ನು ವೀಕ್ಷಿಸಲು 'ಸ್ಟೀಲ್ ಸಿಟಿ' ರಸ್ತೆಗಳಲ್ಲಿ ಭಾರಿ ಜನಸಮೂಹ ನೆರೆದಿತ್ತು.

ಈಮಧ್ಯೆ, ಜೆಮ್‌ಶೆಡ್‌ಪುರದ ಸಂಸದ ಬಿದ್ಯುತ್ ಬರನ್ ಮಹತೋ ಅವರು ತಮ್ಮ ವೈಯಕ್ತಿಕ ನಿಧಿಯಿಂದ ಇಬ್ಬರು ಮೃತ ವ್ಯಕ್ತಿಗಳ ಕುಟುಂಬಗಳಿಗೆ ತಲಾ 50,000 ರೂ. ನೀಡುವುದಾಗಿ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com