Onion price hike: ಈಗ ಈರುಳ್ಳಿ ಸರದಿ: ಉಳ್ಳಾಗಡ್ಡಿ ದರ ಗಗನಕ್ಕೆ, ಕೆಜಿಗೆ 70 ರೂ; ಡಿಸೆಂಬರ್ ವರೆಗೂ ಏರಿಕೆ ಸಾಧ್ಯತೆ!

ಟೊಮೆಟೋ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಇದೀಗ ಈರುಳ್ಳಿ ದರ ಏರಿಕೆಗೂ ಸಿದ್ಧರಾಗಬೇಕಿದ್ದು, ದೆಹಲಿ ಮಾರುಕಟ್ಟೆಯಲ್ಲಿ ಪ್ರತೀ ಕೆಜಿ ಈರುಳ್ಳಿ 70 ರೂಗೆ ಮಾರಾಟವಾಗುತ್ತಿದೆ.
ಈರುಳ್ಳಿ ದರ ಏರಿಕೆ (ಸಂಗ್ರಹ ಚಿತ್ರ)
ಈರುಳ್ಳಿ ದರ ಏರಿಕೆ (ಸಂಗ್ರಹ ಚಿತ್ರ)

ನವದೆಹಲಿ: ಟೊಮೆಟೋ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಇದೀಗ ಈರುಳ್ಳಿ ದರ ಏರಿಕೆ (price hike)ಗೂ ಸಿದ್ಧರಾಗಬೇಕಿದ್ದು, ದೆಹಲಿ ಮಾರುಕಟ್ಟೆಯಲ್ಲಿ ಪ್ರತೀ ಕೆಜಿ ಈರುಳ್ಳಿ 70 ರೂಗೆ ಮಾರಾಟವಾಗುತ್ತಿದೆ.

ಹೌದು.. ಈ ಬಾರಿ ದೀಪಾವಳಿ (Diwali) ಹಬ್ಬಕ್ಕೂ ಮುನ್ನವೇ ಈರುಳ್ಳಿ ದರ ಗಗನಕ್ಕೇರಿದ್ದು, ಈರುಳ್ಳಿ ಬೆಲೆ ಶೇ.25 ರಿಂದ 50 ರಷ್ಟು ಏರಿಕೆಯಾಗಿದೆ.  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈರುಳ್ಳಿ (onions) ಗುಣಮಟ್ಟಕ್ಕೆ ಅನುಗುಣವಾಗಿ ಕೆಜಿಗೆ 60-70 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಂಗಸಂಸ್ಥೆಯಾದ ಮದರ್ ಡೈರಿ ಕೂಡ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಬೆಲೆಗಳನ್ನು ಹೆಚ್ಚಿಸಿದೆ.

ಇಳುವರಿ ಕಡಿಮೆ
ಈ ಬಾರಿ ದೇಶಾದ್ಯಂತ ಮಳೆ ಕೊರತೆಯುಂಟಾಗಿದ್ದು, ಇದರಿಂದ ಈರುಳ್ಳಿ ಇಳುವರಿ ಕಡಿಮೆ (low Yields)ಯಾಗಿದೆ ಎಂದು ಹೇಳಲಾಗಿದೆ. ಇದು ಈರುಳ್ಳಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದು ಈರುಳ್ಳಿ ಬೆಲೆ ಐದು ಕೆಜಿಗೆ 350 ರೂಪಾಯಿ ತಲುಪಿದ್ದು, ನಿನ್ನೆ 300 ರೂಪಾಯಿಗೆ ಮಾರಾಟವಾಗಿತ್ತು. ಅದಕ್ಕೂ ಮೊದಲು 280 ರೂಗೆ ಮತ್ತು ವಾರದ ಹಿಂದೆ 160ರಿಂದ 200ರೂ ಗೆ ಮಾರಾಟವಾಗುತ್ತಿತ್ತು ಎಂದು ಗಾಜಿಪುರದ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 26 ರ ಹೊತ್ತಿಗೆ ಈರುಳ್ಳಿಯ ಸರಾಸರಿ ಸಗಟು ಬೆಲೆ ಕ್ವಿಂಟಲ್‌ಗೆ 3,112.6 ರೂ.ಗೆ ತಲುಪಿದೆ. ಇದು ಅಕ್ಟೋಬರ್ 1 ರಂದು ಕ್ವಿಂಟಲ್‌ಗೆ ಇದ್ದ 2,506.62 ರೂ.ಗಿಂತ ಹೆಚ್ಚಾಗಿದೆ. 

ಮಹಾರಾಷ್ಟ್ರದಲ್ಲೂ ದರ ಏರಿಕೆ
ವರದಿಗಳ ಪ್ರಕಾರ, ಮಹಾರಾಷ್ಟ್ರ (Maharashtra)ದ ಲಾಸಲ್‌ಗಾಂವ್‌ನಲ್ಲಿ ಕಳೆದ ಎರಡು ವಾರಗಳಲ್ಲಿ ಸಗಟು ಬೆಲೆ ಸುಮಾರು ಶೇ.60 ಪ್ರತಿಶತದಷ್ಟು ಹೆಚ್ಚಾಗಿದೆ. ದೇಶದ ಹಲವೆಡೆ ಈರುಳ್ಳಿ ಶೇ.50ರಷ್ಟು ಏರಿಕೆಯಾಗಿದೆ. ಅಹ್ಮದ್‌ನಗರ ಜಿಲ್ಲಾ ಈರುಳ್ಳಿ ವರ್ತಕರ ಸಂಘದ ಪ್ರಕಾರ, ಹತ್ತು ದಿನಗಳ ಹಿಂದೆ ಅಹಮದ್‌ನಗರ ಮಾರುಕಟ್ಟೆಯಲ್ಲಿ ಈರುಳ್ಳಿಯ ಸರಾಸರಿ ಬೆಲೆ ಕೆಜಿಗೆ 35 ರಿಂದ 45 ರೂ.ಗೆ ಏರಿಕೆಯಾಗಿದೆ. ಹೆಚ್ಚುತ್ತಿರುವ ಬೇಡಿಕೆ ಮತ್ತು ಉತ್ಪಾದನೆ ವಿಳಂಬ ಎದುರಿಸಲು ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಫ್ತು ಸುಂಕವನ್ನು ವಿಧಿಸಿತ್ತು. ಇದಾದ ನಂತರ ಈರುಳ್ಳಿ ಬೆಲೆ ಏರಲಾರಂಭಿಸಿದೆ ಎನ್ನಲಾಗಿದೆ. 

ದರ ಏರಿಕೆ ನಿಯಂತ್ರಣಕ್ಕೆ ಕ್ರಮ
ಏರುತ್ತಿರುವ ಬೆಲೆಗಳನ್ನು ನಿಭಾಯಿಸಲು ಸಗಟು ಮಾರುಕಟ್ಟೆಗಳಿಂದ ಕಡಿಮೆ ದರದಲ್ಲಿ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಿಂದ ಖರೀದಿಸಿದ ಈರುಳ್ಳಿ ಮಾರಾಟಕ್ಕೆ ಆರಂಭಿಸಲಾಗಿದೆ. ಆದರೆ, ಹಬ್ಬ ಹರಿದಿನಗಳಲ್ಲಿ ಹೆಚ್ಚಿದ ಬೇಡಿಕೆ ಮತ್ತು ದಾಸ್ತಾನು ಕಡಿಮೆಯಾದ ಕಾರಣ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಈರುಳ್ಳಿ ಬೆಲೆಯಿಂದ ಗ್ರಾಹಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 25 ರೂ.ನಂತೆ ಸಬ್ಸಿಡಿ (subsidy) ದರದಲ್ಲಿ ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ.

ಹವಾಮಾನ ಬದಲಾವಣೆಯಿಂದ ರೈತರು ತಡವಾಗಿ ಈರುಳ್ಳಿ ನಾಟಿ ಮಾಡಿದರು. ಇದರಿಂದ ಬೆಳೆ ಇಳುವರಿ ವಿಳಂಬವಾಗುತ್ತಿದೆ. ಇದರಿಂದಾಗಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2023-24ರ ಆರ್ಥಿಕ ವರ್ಷದಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆಯುಎನ್‌ಸಿಸಿಎಫ್ ಮತ್ತು ನಾಫೆಡ್ ಸಹಭಾಗಿತ್ವದಲ್ಲಿ 5 ಲಕ್ಷ ಟನ್ ಈರುಳ್ಳಿಯನ್ನು ದಾಸ್ತಾನು ಮಾಡಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 2 ಲಕ್ಷ ಟನ್ ಈರುಳ್ಳಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com