
ನವದೆಹಲಿ: ಆಂಧ್ರಪ್ರದೇಶ ಸಂಭವಿಸಿದು ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, "ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ರೈಲು ಹಳಿತಪ್ಪಿ ಸಂಭವಿಸಿರುವ ದುರಂತದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ, ದುರ್ಘಟನೆಯಲ್ಲಿ ಹಲವರು ಜೀವ ಕಳೆದುಕೊಂಡಿದ್ದು, ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪಗಳನ್ನು ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಬಾಲಸೋರ್ ರೈಲು ದುರಂತ ಘಟನೆ ಬಳಿಕವೂ ಕೇಂದ್ರ ಸರ್ಕಾರ ಸುರಕ್ಷತೆಯನ್ನು ಗಾಳಿಗೆ ತೂರಿದಂತಿದೆ. ಕೇಂದ್ರ ಸರ್ಕಾರ ಅಬ್ಬರ ಮತ್ತು ಪ್ರಚಾರಗಳೊಂದಿಗೆ ರೈಲುಗಳಿಗೆ ಚಾಲನೆ ನೀಡುವುದರಲ್ಲಿ ತೋರುವ ಉತ್ಸಾಹವನ್ನು ಸುರಕ್ಷತೆ ಒದಗಿಸುವುದರತ್ತಲೂ ತೋರಬೇಕು ಎಂದು ತಿಳಿಸಿದ್ದಾರೆ.
ಆಂಧ್ರಪ್ರದೇಶದ ವಿಜಿನಗರಂ ಜಿಲ್ಲೆಯಲ್ಲಿ ನಿನ್ನೆ ಎರಡು ರೈಲುಗಳ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ.
Advertisement