ರಾಷ್ಟ್ರೀಯ ಏಕತಾ ದಿನ: ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಮಂಗಳವಾರ ಪುಷ್ಪ ನಮನ ಸಲ್ಲಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುತ್ತಿರುವ ರಾಷ್ಟ್ರಪತಿ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುತ್ತಿರುವ ರಾಷ್ಟ್ರಪತಿ.
Updated on

ನವದೆಹಲಿ: ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಮಂಗಳವಾರ ಪುಷ್ಪ ನಮನ ಸಲ್ಲಿಸಿದರು.

ನವದೆಹಲಿಯ ಪಟೇಲ್ ಚೌಕ್ ನಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್, ದೆಹಲಿ ಎಲ್‌ಜಿ ವಿಕೆ ಸಕ್ಸೇನಾ ಮತ್ತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಪುಷ್ಪ ನಮನ ಸಲ್ಲಿಸಿದರು.

ಉಕ್ಕಿನ ಮನುಷ್ಯನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸರ್ದಾರ್ ಪಟೇಲ್ ಜಯಂತಿಯ ಸಂದರ್ಭದಲ್ಲಿ ದೇಶದ ಜನತೆಗೆ ಏಕತಾ ದಿನದ ಶುಭಾಶಯಗಳನ್ನು ಹೇಳುತ್ತೇನೆ. 2014 ರಿಂದ ಇಡೀ ದೇಶವು ಈ ದಿನವನ್ನು ಏಕತಾ ದಿನವಾಗಿ ಆಚರಿಸುತ್ತದೆ. ಸ್ವಾತಂತ್ರ್ಯದ ನಂತರ ಬ್ರಿಟಿಷರು ಭಾರತ ತೊರೆದರು ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಸಮಯಲ್ಲಿ ಪಟೇಲ್ ಅವರು ಕೆಲವೇ ದಿನಗಳಲ್ಲಿ ರಾಜರ ಆಡಳಿತದಲ್ಲಿದ್ದ 550ಕ್ಕೂ ಹೆಚ್ಚು ರಾಜ್ಯಗಳನ್ನು ಒಗ್ಗೂಡಿಸಿ ಭಾರತದ ಭೂಪಟವನ್ನು ಸಿದ್ಧಪಡಿಸುವ ಕೆಲಸ ಮಾಡಿದ್ದರು ಎಂದು ಹೇಳಿದರು.

ʼರನ್ ಫಾರ್ ಯೂನಿಟಿʼಗೆ ಅಮಿತ್‌ ಶಾ ಚಾಲನೆ
ಈ ನಡುವೆ ನವದೆಹಲಿಯ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ʼರನ್ ಫಾರ್ ಯೂನಿಟಿʼಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಬೃಹತ್ ದೇಶವನ್ನು ಒಂದುಗೂಡಿಸುವಲ್ಲಿ ಸರ್ದಾರ್ ಪಟೇಲ್ ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಸ್ವಾತಂತ್ರ್ಯಾ ನಂತರ ಬ್ರಿಟಿಷರು ದೇಶವನ್ನು ಛಿದ್ರಗೊಳಿಸಿ ಹೊರಟು ಹೋಗಿದ್ದು, ಆ ಸಮಯದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕೆಲವೇ ದಿನಗಳಲ್ಲಿ 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಒಗ್ಗೂಡಿಸಿ ಭಾರತದ ಭೂಪಟವನ್ನು ರೂಪಿಸುವ ಕೆಲಸವನ್ನು ಮಾಡಿದರು ಎಂದು ಹೇಳಿದರು.

ಇದೇ ವೇಳೆ ʼರನ್‌ ಫಾರ್‌ ಯುನಿಟಿʼಯಲ್ಲಿ ನೆರೆದಿದ್ದ ಜನರಿಗೆ ಏಕತೆಯ ಪ್ರತಿಜ್ಞೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನುರಾಗ್ ಸಿಂಗ್ ಠಾಕೂರ್, ನಿತ್ಯಾನಂದ ರೈ, ನಿಶಿತ್ ಪ್ರಮಾಣಿಕ್, ಅಜಯ್ ಕುಮಾರ್ ಮಿಶ್ರಾ, ಮೀನಾಕ್ಷಿ ಲೇಖಿ ಉಪಸ್ಥಿತರಿದ್ದರು.

ಅವರ ಸೇವೆಗೆ ನಾವು ಸದಾ ಋಣಿ: ಪ್ರಧಾನಿ ಮೋದಿ

ಇನ್ನು ಸಾಮಾಜಿಕ ಜಾಲತಾಣ ಟ್ವಿಟರಲ್ಲಿ ಪ್ರಧಾನಿ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸಿದ್ದಾರೆ.

ಸರ್ದಾರ್ ಪಟೇಲ್ ಅವರ ಜಯಂತಿಯ ದಿನದಂದು, ಅವರ ಅದಮ್ಯ ಮನೋಭಾವ, ದೂರದೃಷ್ಟಿಯ ರಾಜನೀತಿ ಮತ್ತು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸಿದ ಅಸಾಧಾರಣ ಸಮರ್ಪಣೆಯನ್ನು ನಾವು ಸ್ಮರಿಸುತ್ತೇವೆ. ಅವರ ರಾಷ್ಟ್ರೀಯ ಏಕೀಕರಣದ ಬದ್ಧತೆಯು ನಮಗೆ ಮಾರ್ಗದರ್ಶನ ನೀಡುತ್ತಲೇ ಇದೆ. ಅವರ ಸೇವೆಗೆ ನಾವು ಸದಾ ಋಣಿಯಾಗಿದ್ದೇವೆಂದು ಹೇಳಿದ್ದಾರೆ.

ರಾಷ್ಟ್ರೀಯ ಏಕತಾ ದಿನವನ್ನು ಪ್ರತಿವರ್ಷ ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. ದೇಶದ ಉಕ್ಕಿನ ಮನುಷ್ಯ ಎಂದೇ ಜನಪ್ರಿಯರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದಕ್ಕೆ ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದಿತು. ಈ ವರ್ಷ ಅವರ 145ನೇ ಜಯಂತಿ.

ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಭಾರತದ ಏಕೀಕರಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲರು ಸಾಕಷ್ಟು ಶ್ರಮಿಸಿದ್ದರು. ಸ್ವತಂತ್ರ ಭಾರತದಲ್ಲಿ ಪಟೇಲರು ಈ ದೇಶ ಕಂಡ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹ ಸಚಿವ. ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಪಟೇಲರು ಕಂಡಿದ್ದ ಕನಸು ಮತ್ತು ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಗುರುತಿಸಿ ಕೇಂದ್ರ ಸರ್ಕಾರ ಅವರ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿವಸ ಎಂದು ಜಾರಿಗೆ ತಂದಿದೆ.

ರಾಷ್ಟ್ರೀಯ ಏಕತೆ ದಿನ ಆಚರಣೆ ಏಕೆ...?
ಭಾರತ ವೈವಿಧ್ಯತೆ ಹೊಂದಿರುವ ದೇಶ, ಇಲ್ಲಿನ ಧರ್ಮ, ಸಂಸ್ಕೃತಿ, ಸಂಪ್ರದಾಯ, ಭಾಷೆಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ವಿವಿಧತೆಯಲ್ಲಿ ಏಕತೆ, ಒಗ್ಗಟ್ಟು ಕಾಪಾಡಿಕೊಂಡು ಹೋಗುವುದು ದೇಶದ ಅಭಿವೃದ್ಧಿಗೆ ಮುಖ್ಯವಾಗಿದೆ. ಹೀಗೆ ಸರ್ದಾರ್ ಪಟೇಲರು ಏಕತೆಗೆ ಯಾವ ರೀತಿ ಕೊಡುಗೆ ನೀಡಿದ್ದರು ಎಂಬ ಬಗ್ಗೆ ಇಂದಿನ ಜನಾಂಗದವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ದಿನವನ್ನು ಆಚರಿಸುತ್ತಿದೆ.

2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿ ಸರ್ದಾರ ಅಣೆಕಟ್ಟಿನ ಎದುರಿಗೆ ಸರ್ದಾರ್ ವಲ್ಲಭಬಾಯಿ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ(597 ಅಡಿ)ಯನ್ನು ಉದ್ಘಾಟಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com