ದರೋಡೆ ಪ್ರಯತ್ನ ವಿಫಲ: ನೋಟ್ ಬರೆದಿಟ್ಟು 'ಒಳ್ಳೆಯ ಬ್ಯಾಂಕ್, ನಮ್ಮನ್ನು ಹಿಡಿಯಬೇಡಿ' ಎಂದ ಕಳ್ಳರು

ತೆಲಂಗಾಣದಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದ್ದು, ದರೋಡೆಗೆ ಯತ್ನಿಸಿದ್ದ ಕಳ್ಳನೋರ್ವ ದರೋಡೆ ವಿಫಲವಾದ ಹಿನ್ನಲೆಯಲ್ಲಿ ನೋಟ್ ಬರೆದಿಟ್ಟು 'ಒಳ್ಳೆಯ ಬ್ಯಾಂಕ್, ನನ್ನನ್ನು ಹಿಡಿಯಬೇಡಿ' ಎಂದು ಮನವಿ ಮಾಡಿದ್ದಾನೆ.
ದರೋಡೆ (ಸಾಂಕೇತಿಕ ಚಿತ್ರ)
ದರೋಡೆ (ಸಾಂಕೇತಿಕ ಚಿತ್ರ)

ಕರೀಂನಗರ: ತೆಲಂಗಾಣದಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದ್ದು, ದರೋಡೆಗೆ ಯತ್ನಿಸಿದ್ದ ಕಳ್ಳನೋರ್ವ ದರೋಡೆ ವಿಫಲವಾದ ಹಿನ್ನಲೆಯಲ್ಲಿ ನೋಟ್ ಬರೆದಿಟ್ಟು 'ಒಳ್ಳೆಯ ಬ್ಯಾಂಕ್, ನನ್ನನ್ನು ಹಿಡಿಯಬೇಡಿ' ಎಂದು ಮನವಿ ಮಾಡಿದ್ದಾನೆ.

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮುಸುಕುಧಾರಿ ಕಳ್ಳರು ಗುರುವಾರ ನೆನ್ನೆಲ್ ಮಂಡಲ್ ಪ್ರಧಾನ ಕಚೇರಿಯಲ್ಲಿರುವ ಸರ್ಕಾರಿ ಗ್ರಾಮೀಣ ಬ್ಯಾಂಕ್ ಶಾಖೆಯ ಮುಖ್ಯ ಬಾಗಿಲಿನ ಬೀಗವನ್ನು ಮುರಿದು ಪ್ರವೇಶಿಸಿದ್ದಾರೆ. ಈ ವೇಳೆ ಬ್ಯಾಂಕ್ ಶಾಖೆಯ ಲಾಕರ್‌ಗಳನ್ನು ತೆರೆಯಲು ಕಳ್ಳರು ವಿಫಲವಾದ ನಂತರ ಕಳ್ಳನೊಬ್ಬ ಭದ್ರತಾ ಕ್ರಮಗಳನ್ನು ಶ್ಲಾಘಿಸಿ ಸಂದೇಶವನ್ನು ಕಳುಹಿಸಿದ್ದಾನೆ ಮತ್ತು ಸಂದೇಶದಲ್ಲಿ ಆತನನ್ನು ಹುಡುಕದಂತೆ ಮನವಿ ಮಾಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಕಳ್ಳರು ಮೊದಲು ಕ್ಯಾಷಿಯರ್ ಮತ್ತು ಗುಮಾಸ್ತರ ಕ್ಯಾಬಿನ್‌ಗಳನ್ನು ಹುಡುಕಾಡಿದ್ದು, ಈ ವೇಳೆ ಅವರಿಗೆ ಯಾವುದೇ ಕರೆನ್ಸಿ ಅಥವಾ ಬೆಲೆಬಾಳುವ ವಸ್ತುಗಳು ಕಂಡುಬಂದಿಲ್ಲ. ಹೀಗಾಗಿ ಕಳ್ಳರು ಬ್ಯಾಂಕ್ ನ ಲಾಕರ್ ಒಡೆಯಲು ಮುಂದಾಗಿದ್ದಾರೆ. ಆದರೆ ಸತತ ಪ್ರಯತ್ನಗಳ ಹೊರತಾಗಿಯೂ ಕಳ್ಳರು ಲಾಕರ್ ತೆರೆಯುವಲ್ಲಿ ವಿಫಲಾದರು. ಹೀಗಾಗಿ ದರೋಡೆ ಪ್ರಯತ್ನ ವಿಫಲವಾದ ಬಳಿಕ ಬ್ಯಾಂಕ್ ಭದ್ರತಾ ಕ್ರಮಕ್ಕೆ  ಬೇಸ್ತು ಬಿದ್ದ ಕಳ್ಳರು ಅಲ್ಲಿಯೇ ಇದ್ದ ಒಂದು ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ತೆಲುಗಿನಲ್ಲಿ ಮಾರ್ಕರ್ ಪೆನ್‌ನಿಂದ ಬರೆದು, "ನನಗೆ ಇಲ್ಲಿ ಒಂದು ರೂಪಾಯಿ ಸಿಗಲಿಲ್ಲ... ಹಾಗಾಗಿ ನನ್ನನ್ನು ಹಿಡಿಯಬೇಡಿ. ನನ್ನ ಬೆರಳಚ್ಚುಗಳು ಇರುವುದಿಲ್ಲ. ಉತ್ತಮ ಬ್ಯಾಂಕ್" ಎಂದು ಬರೆದಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

ಬ್ಯಾಂಕ್ ವಸತಿ ಗೃಹದಿಂದ ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದು ಅವರು ಹೇಳಿದರು. ಶುಕ್ರವಾರ ದರೋಡೆ ಯತ್ನವನ್ನು ಗಮನಿಸಿದ ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಮತ್ತು ಅದರ ಆಧಾರದ ಮೇಲೆ ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳ್ಳರನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com