ವಿಪಕ್ಷಗಳು ತಮ್ಮ ಮೈತ್ರಿಯ ಹೆಸರನ್ನು 'INDIA' ದಿಂದ ‘BHARAT’ ಎಂದು ಬದಲಿಸಿಕೊಳ್ಳಲಿ: ಶಶಿ ತರೂರ್ ಸಲಹೆ

ವಿರೋಧ ಪಕ್ಷಗಳ ಇಂಡಿಯಾ ಬಣವು ತನ್ನ ಹೆಸರನ್ನು 'BHARAT' ಅಂದರೆ 'ಉತ್ತಮಗೊಳಿಸುವಿಕೆ, ಸಾಮರಸ್ಯ ಮತ್ತು ಜವಾಬ್ದಾರಿಯುತ ಪ್ರಗತಿಯ ನಾಳೆಗಾಗಿ ಮೈತ್ರಿ' ಎಂದು ಬದಲಿಸಿಕೊಳ್ಳಲಿ. ಆಗಲಾದರೂ ಆಡಳಿತಾರೂಢ ಬಿಜೆಪಿ ತನ್ನ ದುರಾಸೆಯ ಆಟವನ್ನು ನಿಲ್ಲಿಸಬಹುದು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಸಲಹೆ ನೀಡಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ವಿರೋಧ ಪಕ್ಷಗಳ ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ (ಇಂಡಿಯಾ) ಬಣವು ತನ್ನ ಹೆಸರನ್ನು 'BHARAT' ಅಂದರೆ 'ಉತ್ತಮಗೊಳಿಸುವಿಕೆ, ಸಾಮರಸ್ಯ ಮತ್ತು ಜವಾಬ್ದಾರಿಯುತ ಪ್ರಗತಿಯ ನಾಳೆಗಾಗಿ ಮೈತ್ರಿ' ಎಂದು ಬದಲಿಸಿಕೊಳ್ಳಲಿ. ಆಗಲಾದರೂ ಆಡಳಿತಾರೂಢ ಬಿಜೆಪಿ ತನ್ನ ದುರಾಸೆಯ ಆಟವನ್ನು ನಿಲ್ಲಿಸಬಹುದು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಸಲಹೆ ನೀಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಿ20 ಶೃಂಗಸಭೆ ನಿಮಿತ್ತ ಸೆಪ್ಟೆಂಬರ್ 9ರಂದು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಔತಣಕೂಟಕ್ಕೆಂದು ಕಳುಹಿಸಿರುವ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿಯನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಉಲ್ಲೇಖಿಸಿದೆ.

ಇದೇ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಇದೀಗ ಶಶಿ ತರೂರ್ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾವು ಖಂಡಿತವಾಗಿಯೂ ನಮ್ಮನ್ನು 'ಉತ್ತಮಗೊಳಿಸುವಿಕೆ, ಸಾಮರಸ್ಯ ಮತ್ತು ಜವಾಬ್ದಾರಿಯುತ ಪ್ರಗತಿಯ ನಾಳೆಗಾಗಿ (BHARAT) ಎಂದು ಕರೆದುಕೊಳ್ಳಬಹುದು. ಆಗ ಬಹುಶಃ ಆಡಳಿತ ಪಕ್ಷವು ಹೆಸರು ಬದಲಾಯಿಸುವ ಈ ದುರಾಸೆಯ ಆಟವನ್ನು ನಿಲ್ಲಿಸಬಹುದು' ಎಂದಿದ್ದಾರೆ.

ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆದ ಮೈತ್ರಿಕೂಟದ ಎರಡನೇ ಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಸಮಾನ ಮನಸ್ಕ ವಿರೋಧ ಪಕ್ಷಗಳು ತಮ್ಮ ಮೈತ್ರಿಯನ್ನು INDIA ಎಂದು ಕರೆದಿವೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯನ್ ಮುಜಾಹಿದ್ದೀನ್ ಮತ್ತು ಈಸ್ಟ್ ಇಂಡಿಯಾ ಕಂಪನಿಯಲ್ಲಿ INDIA ಎಂಬ ಪದಗಳಿವೆ ಎಂದು ಇಂಡಿಯಾ ಒಕ್ಕೂಟವನ್ನು ಗುರಿಯಾಗಿಸಿಕೊಂಡಿದ್ದರು.

ನಂತರ, ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ತಮ್ಮ ಉತ್ತರಕ್ಕೂ ಮುಂಚಿತವಾಗಿ ವಿಪಕ್ಷಗಳನ್ನು ಗುರಿಯಾಗಿಸಿಕೊಂಡ ಪ್ರಧಾನಿ, 'ಇದು ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಡುವಿನ ಪರಸ್ಪರ ಅಪನಂಬಿಕೆಯ ಪ್ರತಿಬಿಂಬವಾಗಿದೆ. ಈ ಮೂಲಕ ಅವರು ಯಾರು ತಮ್ಮ ಪ್ರಸ್ತಾಪದೊಂದಿಗೆ ಇದ್ದಾರೆ ಮತ್ತು ಇಲ್ಲ ಎಂಬುದನ್ನು ಪರೀಕ್ಷಿಸಲು ಬಯಸುತ್ತಾರೆ' ಎಂದಿದ್ದರು.

ಬಿಜೆಪಿ ಸಂಸದೀಯ ಸಭೆಯಲ್ಲಿ ಪಕ್ಷದ ಸಂಸದರನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದಲ್ಲಿ, ವಿರೋಧ ಪಕ್ಷದ ಮೈತ್ರಿಯನ್ನು 'ಘಮಾಂಡಿಯಾ ಮೈತ್ರಿ' (ದುರಹಂಕಾರದ ಮೈತ್ರಿ) ಎಂದು ಬಣ್ಣಿಸಿದರು ಮತ್ತು ದೆಹಲಿ ಸೇವಾ ಮಸೂದೆಯ ಮೇಲೆ ನಡೆದ ಮತದಾನದಲ್ಲಿ ಕಂಡ ಗೆಲುವಿಗಾಗಿ ಪಕ್ಷದ ರಾಜ್ಯಸಭಾ ಸದಸ್ಯರನ್ನು ಅಭಿನಂದಿಸಿದರು.

ಈಮಧ್ಯೆ, ಇಂಡಿಯಾವನ್ನು ಈಸ್ಟ್ ಇಂಡಿಯಾ ಕಂಪನಿ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ಗೆ ಹೋಲಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಬಿಜೆಪಿಗೆ ತಿರುಗೇಟು ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com