ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿ ವಿವರಿಸುವಂತೆ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಒತ್ತಾಯ

ಸೆಪ್ಟೆಂಬರ್ 18 ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಅಜೆಂಡಾವನ್ನು ವಿವರಿಸಲು ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ನಾಯಕರು ಮಂಗಳವಾರ ಕೇಂದ್ರವನ್ನು ಒತ್ತಾಯಿಸಿದ್ದಾರೆ. 
ಸಂಸತ್ತು
ಸಂಸತ್ತು

ನವದೆಹಲಿ: ಸೆಪ್ಟೆಂಬರ್ 18 ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಅಜೆಂಡಾವನ್ನು ವಿವರಿಸಲು ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ನಾಯಕರು ಮಂಗಳವಾರ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಪ್ರತಿಪಕ್ಷಗಳು ಅಧಿವೇಶನದಲ್ಲಿ ಪಾಲ್ಗೊಳ್ಳುತ್ತವೆ ಆದರೆ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರ ಸೇರಿದಂತೆ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುತ್ತವೆ ಎನ್ನಲಾಗಿದೆ.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರವಾಗಿ ಅಂಗೀಕರಿಸುವಂತೆ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭೆಯು ಈಗಾಗಲೇ ಮಸೂದೆಯನ್ನು ಅಂಗೀಕರಿಸಿದೆ. ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕೃತ ನಿವಾಸದಲ್ಲಿ ಕರೆದಿದ್ದ ಔತಣಕೂಟ ಸಭೆಯಲ್ಲಿ ಪ್ರತಿಪಕ್ಷದ ನಿಲುವನ್ನು ನಿರ್ಧರಿಸಲಾಯಿತು.

ವಿವಿಧ ವಿರೋಧ ಪಕ್ಷಗಳ ನಾಯಕರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಸಭೆಯ ನಂತರ ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ, 'ಇಂಡಿಯಾ' ಮೈತ್ರಿಕೂಟದ ವಿರೋಧ ಪಕ್ಷಗಳು ವಿಶೇಷ ಅಧಿವೇಶನದ ಕಾರ್ಯತಂತ್ರಗಳ ಕುರಿತು ಚರ್ಚಿಸಿವೆ ಮತ್ತು ಅಧಿವೇಶನದಲ್ಲಿ ಜನರ ಸಮಸ್ಯೆಗಳನ್ನು ಎತ್ತುವತ್ತ ಗಮನ ಹರಿಸಲು ನಿರ್ಧರಿಸಿವೆ' ಎಂದು ಹೇಳಿದ್ದಾರೆ.

ಮೋದಿ ಸರ್ಕಾರವು ಇದೇ ಮೊದಲ ಬಾರಿಗೆ ಕಾರ್ಯಸೂಚಿಯನ್ನು ವಿವರಿಸದೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ. ಯಾವುದೇ ವಿರೋಧ ಪಕ್ಷದ ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ ಅಥವಾ ಮಾಹಿತಿ ನೀಡಿಲ್ಲ. ಇದು ಪ್ರಜಾಪ್ರಭುತ್ವವನ್ನು ನಡೆಸುವ ಮಾರ್ಗವಲ್ಲ ಎಂದು ಅವರು ತಿಳಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್, ಅಧಿವೇಶನದ ಕಾರ್ಯಸೂಚಿಯ ಬಗ್ಗೆ ಸರ್ಕಾರವು ದೇಶವನ್ನು ಕತ್ತಲೆಯಲ್ಲಿ ಇಡುತ್ತಿದೆ ಎಂದು ದೂರಿದ್ದಾರೆ. 

ಐದು ದಿನಗಳ ಅಧಿವೇಶನದಲ್ಲಿ ಕೇವಲ ಸರ್ಕಾರಿ ವ್ಯವಹಾರ ನಡೆಸುವುದು ಅಸಾಧ್ಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಪರ್ಕ) ಜೈರಾಮ್ ರಮೇಶ್ ಹೇಳಿದ್ದಾರೆ.

ನಾವು ಮೋದಿ ಚಾಲೀಸಾಕ್ಕಾಗಿ ಮಾತ್ರ ಕುಳಿತುಕೊಳ್ಳುವುದಿಲ್ಲ. ನಾವು ಖಂಡಿತವಾಗಿಯೂ ಸರ್ಕಾರದಿಂದ ಉತ್ತರವನ್ನು ಕೋರುತ್ತೇವೆ ಮತ್ತು ಪ್ರತಿ ಅಧಿವೇಶನದಲ್ಲಿ ನಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತೇವೆ. ಆದರೆ, ಹಿಂದಿನ ಅಧಿವೇಶನಗಳಲ್ಲಿ ಅವುಗಳನ್ನು ಎತ್ತಲು ನಮಗೆ ಅವಕಾಶ ಸಿಗಲಿಲ್ಲ ಎಂದು ಅವರು ಹೇಳಿದರು.

ಇಂಡಿಯಾದ ಸಭೆಗೆ ಮುಂಚಿತವಾಗಿ, ಕಾಂಗ್ರೆಸ್ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು. ಅಲ್ಲಿ ಉಭಯ ಸದನಗಳ ಪಕ್ಷದ ನಾಯಕರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com