ನವದೆಹಲಿ: ಭಾರತದ ಗಡಿ ಪ್ರದೇಶ ಅಕ್ಸಾಯ್ ಚಿನ್ ಒಳಗೊಂಡ ಮ್ಯಾಪ್ ಅನ್ನು ಚೀನಾ ಬಿಡುಗಡೆ ಮಾಡಿದ ಬೆನ್ನಲ್ಲೇ ಇತ್ತ ಗಡಿಯಲ್ಲಿ ಭಾರತ ಸರ್ಕಾರ ಕೂಡ ತನ್ನ ಚಟುವಟಿಕೆ ಮುಂದುವರೆಸಿದ್ದು, ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣಕ್ಕೆ ಮುಂದಾಗಿದೆ.
ಈ ಬಗ್ಗೆ ಗಡಿ ರಸ್ತೆ ನಿರ್ಮಾಣ ಸಂಸ್ಥೆ ಬಿಆರ್ ಒ (BRO) ಮಾಹಿತಿ ನೀಡಿದ್ದು, ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಮಾರು ₹218 ಕೋಟಿ ವೆಚ್ಚದಲ್ಲಿ ಸುಧಾರಿತ ವಾಯುನೆಲೆಯನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದೆ. ಈ ಯೋಜನೆಗೆ ಸೆ.12 ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ಮಾಡಲಿದ್ದಾರೆ.
ನ್ಯೋಮಾ ಸುಧಾರಿತ ಲ್ಯಾಂಡಿಂಗ್ ನೆಲೆಯು ಸೇನಾ ಯೋಧರು ಮತ್ತು ಸೇನಾ ವಸ್ತುಗಳನ್ನು ಸಾಗಿಸಲು ಸಹಾಯಕವಾಗಲಿದೆ. ಇದನ್ನು ಚೀನಾದ ನಿಜ ಗಡಿ ನಿಯಂತ್ರಣ ರೇಖೆಯಿಂದ 46 ಕಿಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೆ. 12 ರಂದು ಲಡಾಖ್‌ನ ನ್ಯೋಮಾ ವಾಯುನೆಲೆಗೆ ಇ– ಶಿಲಾನ್ಯಾಸ ನಡೆಸಲಿದ್ದಾರೆ ಎಂದು ಭದ್ರತಾ ಪಡೆಯ ಪಿಆರ್‌ಒ ತಿಳಿಸಿದ್ದಾರೆ.
ಏರ್‌ಫೀಲ್ಡ್ ನಿರ್ಮಾಣದಿಂದ ಲಡಾಖ್‌ನಲ್ಲಿ ವಾಯುಪಡೆಯ ಮೂಲಸೌಕರ್ಯ ಮತ್ತು ಉತ್ತರ ಗಡಿ ಭಾಗದಲ್ಲಿ ಭಾರತೀಯ ವಾಯು ಸೇನೆಯ ಬಲ ವೃದ್ಧಿಗೊಳ್ಳಲಿದೆ. ಇದರ ಜತೆಗೆ ರಾಜನಾಥ್ ಸಿಂಗ್ ಅವರು ಗಡಿ ರಸ್ತೆ ಸಂಸ್ಥೆ ₹2,941 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 90 ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2020 ರಿಂದ ಚೀನಾದೊಂದಿಗೆ ನಡೆಯುತ್ತಿರುವ ಸ್ಟ್ಯಾಂಡ್-ಆಫ್ ಸಮಯದಲ್ಲಿ ನ್ಯೋಮಾ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ ಅನ್ನು ಪುರುಷ ಸೈನಿಕರು ಮತ್ತು ಸಾಮಗ್ರಿಗಳ ಸಾಗಣೆಗೆ ಬಳಸಲಾಗಿದೆ ಮತ್ತು ಚಿನೂಕ್ ಹೆವಿ-ಲಿಫ್ಟ್ ಚಾಪರ್ಸ್ ಮತ್ತು C-130J ವಿಶೇಷ ಕಾರ್ಯಾಚರಣೆ ವಿಮಾನಗಳ ಕಾರ್ಯಾಚರಣೆಗಳಿಗೆ ಸಾಕ್ಷಿಯಾಗಿದೆ. 'ಈ ಏರ್‌ಫೀಲ್ಡ್‌ನ ನಿರ್ಮಾಣವು ಲಡಾಖ್‌ನಲ್ಲಿ ವಾಯು ಮೂಲಸೌಕರ್ಯವನ್ನು ಮಹತ್ತರವಾಗಿ ಹೆಚ್ಚಿಸುತ್ತದೆ ಮತ್ತು ನಮ್ಮ ಉತ್ತರದ ಗಡಿಗಳಲ್ಲಿ IAF (ಭಾರತೀಯ ವಾಯುಪಡೆ) ಸಾಮರ್ಥ್ಯವನ್ನು ಹೆಚ್ಚಿಸುತ್ತದೆ' ಎಂದು ಅವರು ಹೇಳಿದರು.
Advertisement