
ಮುಂಬೈ: ಪ್ರಯಾಣಿಕರಿಂದ ತುಂಬಿದ ವಿಮಾನದಲ್ಲೇ ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿರುವ ಮತ್ತೊಂದು ಪ್ರಕರಣ ಶುಕ್ರವಾರ ವರದಿಯಾಗಿದ್ದು, ಬಾಂಗ್ಲಾದೇಶ ಪ್ರಜೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ.
ಗುರುವಾರ ಮುಂಬೈಗೆ ತೆರಳುತ್ತಿದ್ದ ವಿಸ್ತಾರ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ 22 ವರ್ಷದ ಗಗನಸಖಿಗೆ ಪ್ರಯಾಣಿಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದು, ಆಕೆಯನ್ನು ಬಲವಂತವಾಗಿ ತಬ್ಬಿಕೊಂಡಿದ್ದು ಮಾತ್ರವಲ್ಲದೇ ಆಕೆಯ ಮುಂದೆಯೇ ಮರ್ಮಾಂಗ ತೋರಿಸಿ ವಿಕೃತಿ ತೋರಿಸಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ ಹಸ್ತಮೈಥುನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ 22 ವರ್ಷದ ಗಗನಸಖಿ ನೀಡಿರುವ ದೂರಿನ ಮೇರೆಗೆ 30 ವರ್ಷದ ಬಾಂಗ್ಲಾದೇಶ ಪ್ರಜೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ದುಲಾಲ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮೂಲಗಳ ಪ್ರಕಾರ ಗುರುವಾರ ಮುಂಜಾನೆ 4.25ಕ್ಕೆ ವಿಸ್ತಾರಾ ವಿಮಾನವು ಮುಂಬೈನಲ್ಲಿ ಇಳಿಯಲು 30 ನಿಮಿಷಗಳ ಮೊದಲು ಈ ಘಟನೆ ನಡೆದಿದೆ. ಆರೋಪಿ ದುಲಾಲ್ ಫ್ಲೈಟ್ ಅಟೆಂಡೆಂಟ್‌ಗೆ ಕಿರುಕುಳ ನೀಡಿದ್ದಾನೆ ಎಂದು ವರದಿಯಾಗಿದೆ. ಈ ವೇಳೆ ಇತರ ಪ್ರಯಾಣಿಕರು ಸಿಬ್ಬಂದಿಯ ಪರವಾಗಿ ಮಧ್ಯಪ್ರವೇಶಿಸಿದಾಗ ಅವರೊಂದಿಗೂ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೇಳಲಾಗಿದೆ.
30 ವರ್ಷದ ಬಾಂಗ್ಲಾದೇಶಿ ಪ್ರಜೆ ದುಲಾಲ್ ಮಸ್ಕತ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು, ಅಲ್ಲಿಂದ ಅವರು ಢಾಕಾಕ್ಕೆ ಸಂಪರ್ಕ ವಿಮಾನವನ್ನು ಹತ್ತಬೇಕಿತ್ತು. ಆದರೆ ಇದೀಗ ಆತ ಸಹರ್ ಪೊಲೀಸರ ಅತಿಥಿಯಾಗಿದ್ದಾನೆ.
ಮಾನಸಿಕ ಅಸ್ವಸ್ಥ ಎಂದ ವಕೀಲರು
ಇನ್ನು ಆರೋಪಿ ದುಲಾಲ್ ನನ್ನು ಗುರುವಾರ ಅಂಧೇರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಆತನ ಪರ ಹಾಜರಿದ್ದ ಅವರ ಪರ ವಕೀಲ ದುಲಾಲ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಇಂಗ್ಲಿಷ್ ಅಥವಾ ಹಿಂದಿ ಭಾಷೆ ಬರುವುದಿಲ್ಲ ಎಂದು ವಾದಿಸಿದ್ದಾರೆ. ಅದಾಗ್ಯೂ ನ್ಯಾಯಾಲಯ ಆತನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಘಟನೆಯ ಬಗ್ಗೆ ಬಾಂಗ್ಲಾದೇಶ ದೂತಾವಾಸಕ್ಕೂ ಮಾಹಿತಿ ನೀಡಲಾಗಿದೆ.
Advertisement