ಜಮ್ಮು ಮತ್ತು ಕಾಶ್ಮೀರದಲ್ಲಿನ ರಕ್ತಪಾತ ಕೊನೆಗೊಳಿಸಲು ಭಾರತ-ಪಾಕಿಸ್ತಾನ ಮಾತುಕತೆ ಅಗತ್ಯ: ಫಾರೂಕ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದಲ್ಲಿನ ರಕ್ತಪಾತವನ್ನು ಕೊನೆಗೊಳಿಸಲು ಮತ್ತು ಶಾಶ್ವತ ಶಾಂತಿಯನ್ನು ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ರಕ್ತಪಾತವನ್ನು ಕೊನೆಗೊಳಿಸಲು ಮತ್ತು ಶಾಶ್ವತ ಶಾಂತಿಯನ್ನು ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.

ಅನಂತನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಉಪ ಅಧೀಕ್ಷಕ ಹುಮಾಯೂನ್ ಭಟ್ ಅವರ ಕುಟುಂಬವನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಾತುಕತೆ' ನಡೆಯದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದು (ಹಿಂಸಾಚಾರ) ನಿಲ್ಲುತ್ತದೆ ಎಂದುಕೊಂಡರೆ ನಾವು ಮೂರ್ಖರು. ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತೇವೆ. ಮಾತುಕತೆಯ ಹೊರತಾಗಿ ಬೇರೆ ದಾರಿಯಿಲ್ಲ. ಎರಡೂ ದೇಶಗಳು ತಮ್ಮ ಮೊಂಡುತನ ಬಿಟ್ಟು ಮಾತುಕತೆ ನಡೆಸಬೇಕು' ಎಂದರು.

ಭಟ್ ಮತ್ತು ಇತರ ಇಬ್ಬರು ಭದ್ರತಾ ಅಧಿಕಾರಿಗಳಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಮತ್ತು ಮೇಜರ್ ಆಶಿಶ್ ಧೋಂಚಕ್ ಅವರು ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ಬುಧವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ಕುರಿತು ಕೆಲವು ಬಿಜೆಪಿ ನಾಯಕರ ಟೀಕೆಗಳ ಬಗ್ಗೆ ಉತ್ತರಿಸಿದ ಅವರು, ಯುದ್ಧಗಳು ಹಿಂದಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಲ್ಲ ಅಥವಾ ಭವಿಷ್ಯದಲ್ಲಿ ಶಾಂತಿಯನ್ನು ತರುವುದಿಲ್ಲ ಎಂದು ಅಬ್ದುಲ್ಲಾ ಹೇಳಿದರು.

'ಅವರು ಅದನ್ನು ಮಾಡಲಿ, ಅವರನ್ನು ತಡೆಯುವವರು ಯಾರು? ಆದರೆ, ಸಮಸ್ಯೆ ಕೊನೆಗೊಳ್ಳುತ್ತದೆ ಎಂದು ಅವರು ಭಾವಿಸಿದರೆ, ನಾನು ನಿಲ್ಲುವುದಿಲ್ಲ. ಯಾವುದೇ ಸಮಸ್ಯೆಯನ್ನು ಮುಖಾಮುಖಿಯಾಗುವುದರಿಂದಷ್ಟೇ ಪರಿಹರಿಸಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಪಾಕಿಸ್ತಾನ ನಾಲ್ಕು ಯುದ್ಧಗಳನ್ನು ಮಾಡಿದೆ ಮತ್ತು ಗಡಿಗಳು ಇನ್ನೂ ಅದೇ ಸ್ಥಳದಲ್ಲಿವೆ' ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತ್ಯಗೊಂಡಿದೆ ಎಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಬ್ದುಲ್ಲಾ ವಾಗ್ದಾಳಿ ನಡೆಸಿದರು.

'ಇದು ಕುಟುಂಬ ಮತ್ತು ದೇಶಕ್ಕೆ ದೊಡ್ಡ ನಷ್ಟ. ಈ ಯುವ ಡಿಎಸ್‌ಪಿ ಜೊತೆಗೆ ಓರ್ವ ಕರ್ನಲ್ ಮತ್ತು ಮೇಜರ್ ಅನ್ನು ಸಹ ಗುಂಡಿಕ್ಕಿ ಕೊಂದಿರುವುದನ್ನು ನೀವು ನೋಡಿದ್ದೀರಿ. ಈ ವಿನಾಶವು ಬಹಳ ಹಿಂದಿನಿಂದಲೂ ನಡೆಯುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಇದು ಈಗಲೇ ಕೊನೆಗೊಳ್ಳುವ ಸೂಚನೆ ನನಗೆ ಕಾಣಿಸುತ್ತಿಲ್ಲ. ಭಯೋತ್ಪಾದನೆ ಕೊನೆಗೊಂಡಿತು ಎಂದು ಸರ್ಕಾರ ಕೂಗುತ್ತಿದೆ. ನೀವು ಹೇಳಿ, ಅದು ಕೊನೆಗೊಂಡಿದೆಯೇ? ಎಂದು ಪ್ರಶ್ನಿಸಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ಪುನರಾರಂಭದ ಬಗ್ಗೆ ತಮ್ಮ ನಿಲುವನ್ನು ಪುನರುಚ್ಚರಿಸಿದ ಅಬ್ದುಲ್ಲಾ, ಉಕ್ರೇನ್ ಸಂಘರ್ಷದ ಉದಾಹರಣೆಯನ್ನು ಉಲ್ಲೇಖಿಸಿದರು. 'ಉಕ್ರೇನ್ ಪರಿಸ್ಥಿತಿಯನ್ನು ನೋಡಿ. ಎಲ್ಲೆಡೆ ವಿನಾಶವಿದೆ. ಶಾಂತಿ ಸ್ಥಾಪಿಸಲು, ರಷ್ಯಾ ಮತ್ತು ಉಕ್ರೇನ್ ಮಾತುಕತೆ ನಡೆಸಬೇಕಾಗುತ್ತದೆ' ಎಂದು ಅವರು ಹೇಳಿದರು.

ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕೆಂದು ನೀವು ಪ್ರತಿಪಾದಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಮಾತುಕತೆ ಎರಡು ದೇಶಗಳ ನಡುವೆಯೇ ನಡೆಯಬೇಕು. ನನ್ನೊಂದಿಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಭಾರತ ಸ್ವತಂತ್ರವಾದಾಗಿನಿಂದಲೂ ಈ ಸಮಸ್ಯೆ ಇದೆ' ಎಂದು ಹೇಳಿದರು.

ಈ ಭಯೋತ್ಪಾದಕರು ಎಲ್ಲಿಂದ ಬರುತ್ತಿದ್ದಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಸ್ಥಿತಿಯಲ್ಲಿ ನಾನಿಲ್ಲ. ಆದರೆ, ಇತ್ತೀಚಿನ ಘಟನೆಗಳನ್ನು ನೋಡಿದರೆ, ಅವರು ಹೆಚ್ಚು ತರಬೇತಿ ಪಡೆದಿದ್ದಾರೆ ಮತ್ತು ಪಾಕಿಸ್ತಾನದ ಹೊರತಾಗಿ ಬೇರೆ ದೇಶದಿಂದ ಬಂದಿರಬಹುದು ಎಂದೂ ಸೂಚಿಸುತ್ತದೆ ಎಂದರು.

'ನಾನು ಗುಪ್ತಚರ ಅಥವಾ ಸರ್ಕಾರದ ಭಾಗವಾಗಿಲ್ಲ. ಆದ್ದರಿಂದ ಅವರು ಎಲ್ಲಿಂದ ಬಂದವರು ಎಂದು ನಾನು ಹೇಳಲಾರೆ. ಆದರೆ, ಅವರು ಬರುತ್ತಿದ್ದಾರೆ ಮತ್ತು ಅವರು ಸಂಪೂರ್ಣವಾಗಿ ತರಬೇತಿ ಪಡೆಯುತ್ತಿದ್ದಾರೆ. ಈ ಭಯೋತ್ಪಾದಕರು ಬೇರೆ ದೇಶದವರು ಎಂಬ ಬಗ್ಗೆ ನನಗೆ ಭಯವಿದೆ. ಏಕೆಂದರೆ, ಅವರು ಚೆನ್ನಾಗಿ ತರಬೇತಿ ಪಡೆದಿದ್ದಾರೆ' ಎಂದು ಅವರು ಹೇಳಿದರು.

ಆಫ್ಘನ್ನರ ಒಳಗೊಳ್ಳುವಿಕೆಯ ಬಗ್ಗೆ ನೀವು ಸುಳಿವು ನೀಡುತ್ತೀರಾ ಎಂದು ಕೇಳಿದಾಗ, ಯಾರ ಮೇಲೂ ಬೆರಳು ತೋರಿಸಲು ಬಯಸುವುದಿಲ್ಲ. ಅರ್ಥ ಮಾಡಿಕೊಳ್ಳಬೇಕಾದವರು ಅರ್ಥಮಾಡಿಕೊಳ್ಳುತ್ತಾರೆ. ಅಪಾಯವಿದೆ, ಸನ್ನಿಹಿತ ಅಪಾಯವಿದೆ. ನಾವು ಇದನ್ನು ಪ್ರತಿದಿನ ಎದುರಿಸಬೇಕಾಗಿದೆ. ನಮ್ಮ ಜನರು ಸಾಯುತ್ತಿದ್ದಾರೆ, ನಮ್ಮ ಜವಾನರು ಸಾಯುತ್ತಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com