ಕಾಶ್ಮೀರದಲ್ಲಿನ ತನ್ನ ಗೊಂದಲದ ನೀತಿಗಳನ್ನು ಅಪ್ಪಿಕೊಂಡು ಜನರು ಸಾಯಲಿ ಎಂದು ಸರ್ಕಾರ ನಿರೀಕ್ಷಿಸುತ್ತಿದೆ': ಚಿದಂಬರಂ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿ ಹುತಾತ್ಮರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲು ಸರ್ಕಾರ ಒಂದು ಕ್ಷಣವನ್ನೂ ಮೀಸಲಿಡುತ್ತಿಲ್ಲ ಎಂದು ದೂರಿದ್ದಾರೆ. 
ಪಿ ಚಿದಂಬಂರಂ
ಪಿ ಚಿದಂಬಂರಂ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿ ಹುತಾತ್ಮರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲು ಸರ್ಕಾರ ಒಂದು ಕ್ಷಣವನ್ನೂ ವ್ಯಯಿಸಲು ಸಿದ್ದರಿಲ್ಲ. ಕಾಶ್ಮೀರದಲ್ಲಿನ ಸರ್ಕಾರದ ನೀತಿಗಳು ಗೊಂದಲಮಯವಾಗಿದ್ದು, ಭದ್ರತಾ ಸಿಬ್ಬಂದಿ ಸೇರಿದಂತೆ ಜನರು ಈ ನೀತಿಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ಸಾಯಲಿ ಎಂದು ಸರ್ಕಾರ ನಿರೀಕ್ಷಿಸುತ್ತಿದೆ ಎಂದು ತೋರುತ್ತದೆ ಎಂದಿದ್ದಾರೆ. 

ಬುಧವಾರ ಬೆಳಗ್ಗೆ ಅನಂತನಾಗ್ ಜಿಲ್ಲೆಯ ಕೊಕರ್ನಾಗ್‌ನ ಗಡೋಲ್ ಅರಣ್ಯದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್, 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಮೇಜರ್ ಆಶಿಶ್ ಧೋಂಚಕ್, ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಮತ್ತು ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸೆಪ್ಟೆಂಬರ್ 13ರಂದು ಬುಧವಾರ ಕಾಶ್ಮೀರದಲ್ಲಿ ಓರ್ವ ಕರ್ನಲ್, ಮೇಜರ್, ಡಿಎಸ್‌ಪಿ ಮತ್ತು ರೈಫಲ್‌ಮ್ಯಾನ್ ಹುತಾತ್ಮರಾದರು. ಆಡಳಿತಾರೂಢ ಬಿಜೆಪಿ ಸರ್ಕಾರವು ಹುತಾತ್ಮರಿಗೆ ಗೌರವ ಸಲ್ಲಿಸಲು ಒಂದು ನಿಮಿಷವನ್ನೂ ವ್ಯಯಿಸಲು ಸಿದ್ದರಿಲ್ಲ' ಎಂದು ದೂರಿದ್ದಾರೆ. 

'ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವು ಅಸ್ಪಷ್ಟ ಮತ್ತು ದೋಷಪೂರಿತ ನೀತಿಗಳನ್ನು ರೂಪಿಸಿದ್ದು, ಇವುಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗುವವರು ಸಾಯಲಿ ಎಂದೇ ಸರ್ಕಾರ ನಿರೀಕ್ಷಿಸುತ್ತಿದೆ. ಎಲ್ಲಿಯವರೆಗೆ ಕಾಶ್ಮೀರದ ಜನರನ್ನು ಪರಕೀಯರು ಮತ್ತು ತಮ್ಮ ಅಧಿಕಾರಿಗಳು ಅಥವಾ ಸರ್ಕಾರಗಳಿಂದ ವಂಚನೆಗೆ ಒಳಗಾಗುತ್ತಿರುತ್ತಾರೋ, ಅಲ್ಲಿಯವರೆಗೆ ಕಣಿವೆಯಲ್ಲಿ ಶಾಂತಿ ಸ್ಥಾಪನೆಯಾಗುವುದಿಲ್ಲ' ಎಂದು ಚಿದಂಬರಂ ಪ್ರತಿಪಾದಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯನ್ನು ಭಯೋತ್ಪಾದಕರು ಹತ್ಯೆ ಮಾಡಿದ ದಿನದಂದೇ ಬಿಜೆಪಿ ಜಿ20 ಶೃಂಗಸಭೆಯ ಯಶಸ್ಸಿನ "ಸಂಭ್ರಮಾಚರಣೆ" ನಡೆಸಿದೆ ಎಂದು ಇಂಡಿಯಾ ಮೈತ್ರಿಕೂಟದ ಹಲವು ಪಕ್ಷಗಳು ಟೀಕಿಸಿವೆ. ದೇಶದಲ್ಲಿ ಏನೇ ಸಂಭವಿಸಿದರೂ ಪ್ರಧಾನಿ ನರೇಂದ್ರ ಮೋದಿಯವರು ಪುರಸ್ಕಾರ ಸ್ವೀಕರಿಸುವುದನ್ನು ಮಾತ್ರ ಮುಂದೂಡುವುದಿಲ್ಲ ಎಂದು ಕಾಂಗ್ರೆಸ್ ಕಿಡಿ ಕಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com