ಉತ್ತರ ಪ್ರದೇಶ: ಸಿಬ್ಬಂದಿ ಮೊಬೈಲ್ ನಲ್ಲಿ ಮಗ್ನ; ಹಳಿ ಬಿಟ್ಟು ಪ್ಲಾಟ್ ಫಾರಂ ಏರಿದ 'ಎಮು' ರೈಲು; ಐವರು ಅಮಾನತು

ಹಳಿ ಬಿಟ್ಟು ಪ್ಲಾಟ್ ಫಾರಂ ಏರಿದ ರೈಲು ದುರಂತ ಪ್ರಕರಣಕ್ಕೆ ಮಹತ್ತರ ಟ್ವಿಸ್ಟ್ ದೊರೆತಿದ್ದು, ದುರಂತಕ್ಕೆ ರೈಲ್ವೇ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.
ಪ್ಲಾಟ್ ಫಾರಂ ಮೇಲೆ ಹತ್ತಿದ ರೈಲು
ಪ್ಲಾಟ್ ಫಾರಂ ಮೇಲೆ ಹತ್ತಿದ ರೈಲು

ಲಖನೌ: ಹಳಿ ಬಿಟ್ಟು ಪ್ಲಾಟ್ ಫಾರಂ ಏರಿದ ರೈಲು ದುರಂತ ಪ್ರಕರಣಕ್ಕೆ ಮಹತ್ತರ ಟ್ವಿಸ್ಟ್ ದೊರೆತಿದ್ದು, ದುರಂತಕ್ಕೆ ರೈಲ್ವೇ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ಮಂಗಳಾವರ ಸಂಭವಿಸಿದ್ದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಫೋಟಕ ಮಾಹಿತಿ ಲಭಿಸಿದ್ದು, ಈ ರೈಲು ಅಪಘಾತಕ್ಕೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ರೈಲು ಸಿಬ್ಬಂದಿಯ ಎಡವಟ್ಟಿನಿಂದಲೇ ಇಯುಎಂ ರೈಲು ಪ್ಲಾಟ್‌ಫಾರ್ಮ್ ಏರಿ ಹೋಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ವ್ಯಾಪಕ ವೈರಲ್ ಆಗುತ್ತಿದೆ.

ಮಥುರಾ ಜಂಕ್ಸನ್‌ನಲ್ಲಿ ಇದೇ ಮಂಗಳವಾರ ರಾತ್ರಿ ಪ್ರಯಾಣಿಕರನ್ನು ಇಳಿಸಿ ನಿಂತಿದ್ದ ಲೋಕಲ್ ಟ್ರೈನ್ ಅನ್ನು ಅದರ ಲೋಕೊಪೈಲಟ್, ಎಲೆಕ್ಟ್ರಿಕ್ ಹೆಲ್ಪರ್ ಸಿಬ್ಬಂದಿಯ ನಿಗಾಕ್ಕೆ ಬಿಟ್ಟು ಇಳಿದಿದ್ದರು. ಆದರೆ ಆ ಸಿಬ್ಬಂದಿ ಬ್ಯಾಗ್ ಒಂದನ್ನು ಎಂಜಿನ್ ಹ್ಯಾಂಡಲ್ ಮೇಲೆ ಇಟ್ಟು ಮೊಬೈಲ್‌ನಲ್ಲಿ ವಿಡಿಯೊ ಮಾಡುತ್ತಿದ್ದ. ಈ ವೇಳೆ ಬ್ಯಾಗ್‌ನ ಭಾರಕ್ಕೆ ಹ್ಯಾಂಡಲ್ ‍ಮುಂದೆ ಹೋಗಿದೆ. ತಕ್ಷಣವೇ ರೈಲು ವೇಗವಾಗಿ ಮುಂದೆ ಇದ್ದ ತಡೆಗೋಡೆಗೆ ಡಿಕ್ಕಿಯಾಗಿ ಫ್ಲಾಟ್‌ಫಾರ್ಮ್ ಏರಿ ನಿಂತಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾ‍ಪಾಯ ಆಗಿಲ್ಲ. ಘಟನೆ ನಡೆದ ಮೇಲೂ ಕೂಡ ಸಿಬ್ಬಂದಿ ಮೊಬೈಲ್ ನೋಡುತ್ತಲೇ ಗಾಬರಿಯಿಂದ ಅಲ್ಲಿಗೆ ದೌಡಾಯಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾನೆ. ಈ ಪ್ರಕರಣ ಉತ್ತರ ಪ್ರದೇಶದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ರಾತ್ರಿಯಾದ್ದರಿಂದ ಪ್ಲಾಟ್ ಫಾರಂ ಮೇಲೆ ಪ್ರಯಾಣಿಕರಿರಲಿಲ್ಲ. ಹೀಗಾಗಿ ಆಗಬಹುದಾಗಿದ್ದ ದುರಂತ ತಪ್ಪಿತ್ತು.

5 ಸಿಬ್ಬಂದಿ ಅಮಾನತು
ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದ್ದು ರೈಲಿನ ಸಿಸಿಟಿವಿ ವಿಡಿಯೊದಲ್ಲಿ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉತ್ತರ ಕೇಂದ್ರ ರೈಲ್ವೆ ವಲಯ ಆಗ್ರಾ ವಿಭಾಗದ ಐವರು ಸಿಬ್ಬಂದಿಗಳನ್ನು ಅಮಾನತು ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಗ್ರಾ ವಿಭಾಗದ ಪಿಆರ್‌ಒ ಪ್ರಶಸ್ತಿ ಶ್ರೀವಾಸ್ತವ್, 'ದೆಹಲಿಯ ಶಕುರ್ ಬಸ್ತಿ ನಿಲ್ದಾಣದಿಂದ ಆಗಮಿಸಿದ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (ಇಎಂಯು) ರೈಲು ಹಳಿಯಿಂದ ಜಿಗಿದು ಮಥುರಾ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 2ಎಗೆ ಏರಿತು. ರೈಲು OHE ಲೈನ್ ಅನ್ನು ಸಹ ಅಡ್ಡಿಪಡಿಸಿತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಈ ಘಟನೆಯ ನಂತರ ಐವರು ರೈಲ್ವೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಲೋಕೋ ಪೈಲಟ್ ಗೋವಿಂದ ಹರಿ ಶರ್ಮಾ, ಸಹಾಯಕ (ಎಲೆಕ್ಟ್ರಿಕಲ್) ಸಚಿನ್, ತಂತ್ರಜ್ಞರಾದ ಕುಲ್ಜೀತ್ ಮತ್ತು ಬ್ರಿಜೇಶ್ ಮತ್ತು ಹರ್ಬನ್ ಕುಮಾರ್ ರನ್ನು ಅಮಾನತುಗೊಳಿಸಲಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಾಂಶು ಶೇಖರ್ ಉಪಾಧ್ಯಾಯ ತಿಳಿಸಿದ್ದಾರೆ.

ಪ್ರಕರಣವನ್ನು ಅಧಿಕಾರಿಗಳು ಉನ್ನತ ತನಿಖೆಗೆ ಆದೇಶಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com