ಮುಂಬೈ: ಇಂಡಿಗೋ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಸ್ವೀಡನ್ ಪ್ರಜೆ ಬಂಧನ

ಇಂಡಿಗೋ ವಿಮಾನದ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮುಂಬೈನಲ್ಲಿ ಸ್ವೀಡನ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಇಂಡಿಗೋ ಏರ್ಲೈನ್ಸ್ (ಸಂಗ್ರಹ ಚಿತ್ರ)
ಇಂಡಿಗೋ ಏರ್ಲೈನ್ಸ್ (ಸಂಗ್ರಹ ಚಿತ್ರ)

ಮುಂಬೈ: ಇಂಡಿಗೋ ವಿಮಾನದ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮುಂಬೈನಲ್ಲಿ ಸ್ವೀಡನ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬ್ಯಾಂಕಾಕ್‌ನಿಂದ ಇಂಡಿಗೋ ವಿಮಾನದಲ್ಲಿ ಕುಡಿದು ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದ ಮೇಲೆ 63 ವರ್ಷದ ಸ್ವೀಡಿಷ್ ಪ್ರಜೆಯನ್ನು ಮುಂಬೈನಲ್ಲಿ ಗುರುವಾರ ಬಂಧಿಸಲಾಗಿದೆ. ಆರೋಪಿ ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್‌ಬರ್ಗ್‌ನನ್ನು ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಮಾಡಿದಾಗ ವಿಮಾನಯಾನ ಸಿಬ್ಬಂದಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಮೂಲಗಳ ಪ್ರಕಾರ ವಿಮಾನದ ಮಹಿಳಾ ಸಿಬ್ಬಂದಿ ಊಟ ಬಡಿಸುವಾಗ ಆರೋಪಿ ಪ್ರಯಾಣಿಕ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ ಎನ್ನಲಾಗಿದೆ. ವಿಮಾನ ಇಳಿಯುವವರೆಗೂ ಆತ ತನ್ನ ಪ್ರವೃತ್ತಿಯನ್ನು ಮುಂದುವರೆಸಿದ್ದ. ಒಂದು ಹಂತದಲ್ಲಿ, 24 ವರ್ಷದ ಕ್ಯಾಬಿನ್ ಸಿಬ್ಬಂದಿ ಕ್ಯಾಪ್ಟನ್‌ಗೆ ಮಾಹಿತಿ ನೀಡಿ ಆರೋಪಿ ಪ್ರಯಾಣಿಕನಿಗೆ ಎಚ್ಚರಿಕೆ ಕೂಡ ನೀಡಿದ್ದರು. 

ಬಳಿಕ ಇಂಡಿಗೋ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದು, ದೂರಿನಲ್ಲಿ ಘಟನೆಯನ್ನು ವಿವರಿಸಿರುವ ಸಿಬ್ಬಂದಿ, "ನಾನು ಕುಡಿದು ಬಂದ ವೆಸ್ಟ್‌ಬರ್ಗ್ (28-E ನಲ್ಲಿ ಕುಳಿತಿದ್ದ) ಗೆ, ವಿಮಾನದಲ್ಲಿ ಸಮುದ್ರಾಹಾರವಿಲ್ಲ ಎಂದು ತಿಳಿಸಿದಾಗ ಸಮಸ್ಯೆ ಪ್ರಾರಂಭವಾಯಿತು. ನಾನು ಅವರಿಗೆ ಚಿಕನ್ ಊಟವನ್ನು ನೀಡಿದ್ದೆ. ಅವರು ATM ಕಾರ್ಡ್‌ಗಾಗಿ POS ಯಂತ್ರದ ಮೂಲಕ ಪಾವತಿ ಮಾಡಲು, ಕಾರ್ಡ್ ಅನ್ನು ಸ್ವೈಪ್ ಮಾಡುವ ನೆಪದಲ್ಲಿ, ಪ್ರಯಾಣಿಕನು ನನ್ನ ಕೈಯನ್ನು ಹಿಡಿದನು, ನಾನು ಅದನ್ನು ಹಿಂದಕ್ಕೆ ಎಳೆದು ಕಾರ್ಡ್ PIN ಅನ್ನು ನಮೂದಿಸಲು ಹೇಳಿದೆ. ಈ ಬಾರಿ ಅವನು ಮಿತಿ ಮೀರಿ ವರ್ತಿಸಿದ. ಅವನು ಇತರ ಪ್ರಯಾಣಿಕರ ಮುಂದೆ ನನಗೆ ಕಿರುಕುಳ ನೀಡಿದ, ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ನಾನು ಕೂಗಿದಾಗ, ಆತ ತನ್ನ ಸೀಟಿನಲ್ಲಿ ಕುಳಿತುಕೊಂಡ ಎಂದು ತಮಗಾದ ಕರಾಳ ಅನುಭವವನ್ನು ಬಿಟ್ಟಿಟ್ಟಿದ್ದಾರೆ.

ಆರೋಪಿ ಪರ ವಕೀಲರ ವಾದ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆರೋಪಿ ಪರ ವಕೀಲರು, 'ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರ ದೇಹವು ನಡುಗುತ್ತಿದೆ. ಅವರು ಬೇರೆಯವರ ಸಹಾಯವಿಲ್ಲದೆ ಏನನ್ನೂ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಅವರು ಕ್ಯಾಬಿನ್ ಸಿಬ್ಬಂದಿಯನ್ನು ಸ್ಪರ್ಶಿಸಿದಾಗ ಅವರು ಪಿಒಎಸ್ ಪಾವತಿ ಕಾರ್ಡ್ ಯಂತ್ರವನ್ನು ಹಿಡಿದಿಡಲು ಪ್ರಯತ್ನಿಸಿದರು. ಅವರು ಉದ್ದೇಶಪೂರ್ವಕವಾಗಿ ಆಕೆಯನ್ನು ಮುಟ್ಟಿಲ್ಲ" ಎಂದು ಹೇಳಿದ್ದಾರೆ.

ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಅಧಿಕಾರಿಗಳ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಬಂಧನಕ್ಕೊಳಗಾದ 8ನೇ ಅಶಿಸ್ತಿನ ವಿಮಾನ ಪ್ರಯಾಣಿಕ ಈತನಾಗಿದ್ದಾನೆ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com