'ಇದಕ್ಕೆಲ್ಲ ಸೊಪ್ಪಾಕಲ್ಲ'; ಅರುಣಾಚಲ ಪ್ರದೇಶ ಸ್ಥಳಗಳ ಮರುನಾಮಕರಣ, ಚೀನಾ ನಡೆ ತಿರಸ್ಕರಿಸಿದ ಭಾರತ
ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಚೀನಾ ಮರುನಾಮಕರಣವನ್ನು ಭಾರತ ಸರ್ಕಾರ ಮಂಗಳವಾರ ಸಾರಾಸಗಟಾಗಿ ತಿರಸ್ಕರಿಸಿದ್ದು, ಅರುಣಾಚಲ ಪ್ರದೇಶ ರಾಜ್ಯವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಪ್ರತಿಪಾದಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ "ಆವಿಷ್ಕರಿಸಿದ ಹೆಸರುಗಳನ್ನು" ನಿಯೋಜಿಸುವ ಪ್ರಯತ್ನಗಳು ಹಾಲಿ ವಾಸ್ತವತೆಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ನಾವು ಇಂತಹ ವರದಿಗಳನ್ನು ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನ ಮಾಡಿರುವುದು ಇದೇ ಮೊದಲಲ್ಲ. ನಾವು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ" ಎಂದು ಬಾಗ್ಚಿ ಹೇಳಿದ್ದಾರೆ.
"ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಚೀನಾ ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವ ಪ್ರಯತ್ನಗಳು ಈ ವಾಸ್ತವತೆಯನ್ನು ಬದಲಾಯಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಕೆಲವು ಸ್ಥಳಗಳನ್ನು ಚೀನಾ ಮರುನಾಮಕರಣ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಅವರು ಟ್ವೀಟ್ ಮೂಲಕ ಹೇಳಿಕೆ ನೀಡಿದ್ದಾರೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ 11 ಸ್ಥಳಗಳ ಪ್ರಮಾಣಿತ ಹೆಸರುಗಳನ್ನು ಭಾನುವಾರ ಬಿಡುಗಡೆ ಮಾಡಿತ್ತು. ಇದನ್ನು "ಜಂಗ್ನಾನ್, ಟಿಬೆಟ್‌ನ ದಕ್ಷಿಣ ಭಾಗ" ಎಂದು ಚೀನಾ ಕರೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ