ಅನಿಲ್ ನನ್ನು ಬಿಜೆಪಿ "ಕರಿಬೇವಿನಂತೆ" ಬಳಸಿ ಬಿಸಾಕುತ್ತದೆ: ಸಹೋದರ ಅಜಿತ್ ಆಂಟನಿ

ಮಾಜಿ ರಕ್ಷಣಾ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರ ಪುತ್ರ ಅನಿಲ್ ಆಂಟನಿ ಅವರು ಗುರುವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಂಟನಿ ಅವರ ಕಿರಿಯ ಪುತ್ರ ಅಜಿತ್....
ಅನಿಲ್ ಆಂಟನಿ ಬಿಜೆಪಿ ಸೇರ್ಪಡೆ
ಅನಿಲ್ ಆಂಟನಿ ಬಿಜೆಪಿ ಸೇರ್ಪಡೆ

ತಿರುವನಂತಪುರ: ಮಾಜಿ ರಕ್ಷಣಾ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರ ಪುತ್ರ ಅನಿಲ್ ಆಂಟನಿ ಅವರು ಗುರುವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಂಟನಿ ಅವರ ಕಿರಿಯ ಪುತ್ರ ಅಜಿತ್ ಆಂಟನಿ ಅವರು, ತಮ್ಮ ಸಹೋದರನ ನಿರ್ಧಾರ "ಆತುರದ ನಿರ್ಧಾರ". ಕೇಸರಿ ಪಕ್ಷ ಅವರನ್ನು ಬಳಸಿಕೊಂಡ ನಂತರ "ಕರಿಬೇವಿನ ಎಲೆ"ಯಂತೆ ಬಿಸಾಕುತ್ತದೆ ಎಂದು ಶುಕ್ರವಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಆಂಟನಿ, ಅನಿಲ್ ಅವರು ತಮ್ಮ ನಿರ್ಧಾರದ ಬಗ್ಗೆ ಕುಟುಂಬಕ್ಕೆ ಕಿಂಚಿತ್ತೂ ಸುಳಿವು ನೀಡಿಲ್ಲ. ನಿನ್ನೆ ಚಾನೆಲ್‌ಗಳಲ್ಲಿ ಫ್ಲ್ಯಾಶ್ ಸುದ್ದಿ ನೋಡಿ ನಮಗೆಲ್ಲರಿಗೂ ಆಘಾತವಾಗಿದೆ ಎಂದಿದ್ದಾರೆ.

ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅನಿಲ್ ಕೇಸರಿ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದ್ದನ್ನು ನೋಡಿದ ನಂತರ ನಮ್ಮ ತಂದೆ ತುಂಬಾ ನೊಂದುಕೊಂಡಿದ್ದಾರೆ ಎಂದರು.

"ಪಪ್ಪ (ಎ ಕೆ ಆಂಟನಿ) ಮನೆಯ ಮೂಲೆಯೊಂದರಲ್ಲಿ ಅತ್ಯಂತ ನೋವಿನಿಂದ ಕುಳಿತಿದ್ದರು. ನನ್ನ ಜೀವನದಲ್ಲಿ ನಾನು ಅವರು ಇಷ್ಟೋಂದು ಬೇಸರವಾಗಿದ್ದನ್ನು ನಾನು ನೋಡೆ ಇಲ್ಲ. ಅವರು ಕಣ್ಣೀರು ಹಾಕಲಿಲ್ಲ, ಅಷ್ಟೇ" ಎಂದು ಅಜಿತ್ ಹೇಳಿದ್ದಾರೆ.

"ಅವರು ಮುನಿಸಿಕೊಂಡು ಕಾಂಗ್ರೆಸ್ ನಿಂದ ದೂರ ಉಳಿಯುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಅವರು ಬಿಜೆಪಿಗೆ ಹೋಗುತ್ತಾರೆ ಎಂದು ಎಂದಿಗೂ ಯೋಚಿಸಲಿಲ್ಲ. ಅವರ ಈ ನಿರ್ಧಾರ ಅನಿರೀಕ್ಷಿತ" ಎಂದು ಅನಿಲ್ ಕಿರಿಯ ಸಹೋದರ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com