ವಾಕಪಲ್ಲಿ 11 ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 13 ಪೊಲೀಸರ ಖುಲಾಸೆ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ವಾಕಪಲ್ಲಿಯಲ್ಲಿನ 11 ಬುಡಕಟ್ಟು ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಶೇಷ ನ್ಯಾಯಾಲಯ ’ಅಸಮರ್ಪಕ ತನಿಖೆ’ ಕಾರಣ ನೀಡಿ 13 ಆರೋಪಿ ಪೊಲೀಸರನ್ನು ಖುಲಾಸೆಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್‌: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ವಾಕಪಲ್ಲಿಯಲ್ಲಿನ 11 ಬುಡಕಟ್ಟು ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಶೇಷ ನ್ಯಾಯಾಲಯ ’ಅಸಮರ್ಪಕ ತನಿಖೆ’ ಕಾರಣ ನೀಡಿ 13 ಆರೋಪಿ ಪೊಲೀಸರನ್ನು ಖುಲಾಸೆಗೊಳಿಸಿದೆ.

ನ್ಯಾಯಾಲಯವು ಖುಲಾಸೆಗೆ ಪ್ರಾಥಮಿಕವಾಗಿ ಇಬ್ಬರು ತನಿಖಾಧಿಕಾರಿಗಳು ಕಾರಣ ಎಂದು ಹೇಳಿದ್ದು, ತನಿಖಾಧಿಕಾರಿಗಳು ಸರಿಯಾದ ತನಿಖೆ ನಡೆಸಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ತನಿಖಾಧಿಕಾರಿಗಳಲ್ಲಿ ಒಬ್ಬರಾದ ಶಿವಾನಂದ ರೆಡ್ಡಿ ಅವರು ತನಿಖೆ ನಡೆಸಲು ವಿಫಲರಾದ ಕಾರಣ ರಚಿತವಾದ ಅಪೆಕ್ಸ್ ಕಮಿಟಿ (ಉನ್ನತ ಮಟ್ಟದ ಸಮಿತಿ)ಗೆ ಉಲ್ಲೇಖಿಸುವಂತೆ ನ್ಯಾಯಾಲಯ ಆದೇಶಿಸಿದೆ. ತನಿಖೆಯನ್ನು ನಿರ್ಲಕ್ಷಿಸಿದ ತನಿಖಾಧಿಕಾರಿಗಳ ಕಾರ್ಯವೈಖರಿ ಬಗ್ಗೆಯೂ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

2007ರಲ್ಲಿ ಆಂಧ್ರಪ್ರದೇಶದ ಸೀತಾರಾಮ ರಾಜು ಜಿಲ್ಲೆಯ ಅಲ್ಲೂರು ಗ್ರಾಮದ ಕೊಂಡ್‌ ಬುಡಕಟ್ಟು ಸಮುದಾಯಕ್ಕೆ ಸೇರಿದ 11 ಮಹಿಳೆಯರ ಮೇಲೆ13 ಪೊಲೀಸ್‌ ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದಿವಾಸಿ ಬುಡಕಟ್ಟು ಜನಾಂಗದ ಮೇಲೆ ಅತ್ಯಾಚಾರ ನಡೆಯುತ್ತಿರುವುದರ ಬಗ್ಗೆ ಹಲವು ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದರು.ಈ ಸಂಬಂಧ ಆಂಧ್ರ ಪ್ರದೇಶ ರಾಜ್ಯದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆರೋಪಿಗಳಾದ 13 ‍‍‍ಪೊಲೀಸ್‌ ಸಿಬ್ಬಂದಿಯ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಕೂಂಬಿಂಗ್‌ ಕಾರ್ಯಾಚರಣೆ ಸಲುವಾಗಿ ’ಗ್ರೇಹೌಂಡ್ಸ್‌’ ಎಂಬ ವಿಶೇಷ ಪೊಲೀಸ್‌ ಪಡೆ ಆಗಸ್ಟ್‌ 20, 2007ರಂದು ವಾಕಪಲ್ಲಿ  ಕುಗ್ರಾಮದಲ್ಲಿ ಟಿಕಾಣಿ ಹೂಡಿತ್ತು. ಈ ವೇಳೆ 11 ಬುಡಕಟ್ಟು ಮಹಿಳೆಯರ ಮೇಲೆ ಪೊಲೀಸರಿಂದ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. 2018ರಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇಬ್ಬರು ತನಿಖಾಧಿಕಾರಿಗಳು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಆದರೆ ನಿಷ್ಪಕ್ಷಪಾತ ತನಿಖೆ ನಡೆಸುವಲ್ಲಿ ಈ ಇಬ್ಬರು ತನಿಖಾಧಿಕಾರಿಗಳು ವಿಫಲರಾಗಿದ್ದು , ಇದೇ ಕಾರಣ ನೀಡಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ(ವಿಶೇಷ ನ್ಯಾಯಾಲಯ) ಗುರುವಾರ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಆರೋಪಿಗಳ ಖುಲಾಸೆ ಹೊರತಾಗಿಯೂ ಸಂತ್ರಸ್ಥರಿಗೆ ಪರಿಹಾರ ನೀಡಿ ಎಂದ ನ್ಯಾಯಾಲಯ
ಇನ್ನು ಇದೇ ವೇಳೆ ಅತ್ಯಾಚಾರ ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ) ಮೂಲಕ ಪರಿಹಾರವನ್ನು ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಪೊಲೀಸರನ್ನು ಖುಲಾಸೆಗೊಳಿಸಿದ್ದರೂ, ಅತ್ಯಾಚಾರ ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. "ತನಿಖಾಧಿಕಾರಿಗಳು ಸೂಕ್ತ ತನಿಖೆ ನಡೆಸುವಲ್ಲಿ ವಿಫಲರಾದ ಕಾರಣ ಆರೋಪಿಗಳು ಖುಲಾಸೆಗೊಂಡಿರುವುದರಿಂದ, ಸಂತ್ರಸ್ತರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ವಿಶಾಖಪಟ್ಟಣದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೂಕ್ತ ವಿಚಾರಣೆಯ ನಂತರ ಪರಿಹಾರದ ಪ್ರಮಾಣವನ್ನು ನಿರ್ಧರಿಸಬೇಕು ಮತ್ತು 2007 ರಿಂದ ಲೈಂಗಿಕ ದೌರ್ಜನ್ಯ ಮತ್ತು ಇತರ ಅಪರಾಧಗಳಿಗೆ ಬಲಿಯಾದ ಕಾರಣದ ನಷ್ಟವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ತೀರ್ಪು ಬೇಸರ ತಂದಿದೆ: ಮಾನವ ಹಕ್ಕುಗಳ ವೇದಿಕೆ
'ವಾಕಪಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಇದುವರೆಗೂ ಯಾವೊಬ್ಬ ಆರೋಪಿಯು ಬಂಧಿತನಾಗಿಲ್ಲ. 2007ರಲ್ಲಿ ನಡೆದ ಈ ಘಟನೆಯಲ್ಲಿ 11 ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರವಾಗಿತ್ತು. ಎಲ್ಲ 13 ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಕೆಲವರು ನಿವೃತ್ತಿಯಾದರೆ, ಕೆಲವರು ಮೃತರಾಗಿದ್ದಾರೆ. ವಾಕಪಲ್ಲಿ ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿರುವುದನ್ನು ನೋಡಿದರೆ ಆರೋಪಿಗಳ ಹೇಳಿಕೆಗಳಲ್ಲಿ ನ್ಯಾಯಾಲಯ ನಂಬಿಕೆ ಇಟ್ಟಿದೆ ಎಂಬಂತೆ ಕಾಣುತ್ತದೆ‘ ಎಂದು ಮಾನವ ಹಕ್ಕುಗಳ ವೇದಿಕೆ(ಎಚ್‌ಆರ್‌ಎಫ್‌) ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com