ಸಣ್ಣ ಕುದುರೆಗಳು, ಶ್ವಾನಗಳಿಗೆ ತರಬೇತಿ ನೀಡುವಲ್ಲಿಯೂ ಐಟಿಬಿಪಿ ಮಹಿಳಾ ಸಿಬ್ಬಂದಿ ಎತ್ತಿದಕೈ!

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ನ ಎಂಟು ಮಹಿಳಾ ಸಿಬ್ಬಂದಿ ತಮ್ಮ ಕುದುರೆಗಳು ಮತ್ತು ನಾಯಿಗಳೊಂದಿಗೆ ಬಲಿಷ್ಠ ಮತ್ತು ವಿಶಿಷ್ಟವಾದ ಬಂಧವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ತಮ್ಮ ಘಟಕಕ್ಕೆ ನಿಷ್ಠಾವಂತ ಸೈನಿಕರಾಗಿಸಲು ಸಣ್ಣ ಕುದುರೆಗಳು ಮತ್ತು ಶ್ವಾನಗಳಿಗೆ ತರಬೇತಿ ನೀಡುತ್ತಿದ್ದಾರೆ.
ಸಣ್ಣ ಕುದುರೆ ಮತ್ತು ಶ್ವಾನದೊಂದಿಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಮಹಿಳಾ ಸಿಬ್ಬಂದಿ
ಸಣ್ಣ ಕುದುರೆ ಮತ್ತು ಶ್ವಾನದೊಂದಿಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಮಹಿಳಾ ಸಿಬ್ಬಂದಿ

ಭಾನು (ಪಂಚಕುಲ): ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ನ ಎಂಟು ಮಹಿಳಾ ಸಿಬ್ಬಂದಿ ತಮ್ಮ ಕುದುರೆಗಳು ಮತ್ತು ನಾಯಿಗಳೊಂದಿಗೆ ಬಲಿಷ್ಠ ಮತ್ತು ವಿಶಿಷ್ಟವಾದ ಬಂಧವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ತಮ್ಮ ಘಟಕಕ್ಕೆ ನಿಷ್ಠಾವಂತ ಸೈನಿಕರಾಗಿಸಲು ಸಣ್ಣ ಕುದುರೆಗಳು (ponies) ಮತ್ತು ಶ್ವಾನಗಳಿಗೆ ತರಬೇತಿ ನೀಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗಡಿ ಹೊರಠಾಣೆಗಳಲ್ಲಿ (ಬಿಒಪಿ) ಸಣ್ಣ ಕುದುರೆಗಳ ಮೂಲಕ ಪಡಿತರ ಮತ್ತು ಇತರ ವಸ್ತುಗಳನ್ನು ಸಾಗಿಸಲು ಕಲಿಯುತ್ತಿದ್ದಾರೆ.

ಅವರು ತಮ್ಮ K9 ತಂಡಗಳ ನಾಯಕತ್ವ ವಹಿಸುವ ಶ್ವಾನ ನಿರ್ವಹಣೆಯ ಹೊಣೆಯನ್ನು ಹೊತ್ತಿದ್ದಾರೆ. ಈ ತಂಡವನ್ನು ಪೆಟ್ರೋಲ್ ಸ್ಫೋಟಕ ಪತ್ತೆ ಶ್ವಾನಗಳಾಗಿ (ಪಿಇಡಿಡಿ) ನಿಯೋಜಿಸಲಾಗುವುದು.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಶ್ವಾನ ನಿರ್ವಹಣೆ ಮತ್ತು ಪ್ರಾಣಿಗಳ ಸಾಗಣೆ ಕ್ಷೇತ್ರವನ್ನು ಬರೀ ಪುರುಷರೇ ನೋಡಿಕೊಳ್ಳುತ್ತಿದ್ದರು. ಈ ಮಿತಿಯನ್ನು ದಾಟಿ ಮಹಿಳೆಯರೂ ಮುಂದಾಗಿರುವುದು ಇದೇ ಮೊದಲು. ಅರೆಸೈನಿಕ ಪಡೆ ಎಂಟು ಮಹಿಳೆಯರನ್ನು ಅನಿಮಲ್ ವಿಂಗ್‌ಗೆ ಸೇರಿಸಿಕೊಂಡ ದೇಶದ ಮೊದಲ ಸಿಎಪಿಎಫ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ಫೋಟಕಗಳನ್ನು ಪತ್ತೆಹಚ್ಚಲು ಮತ್ತು ಪೂರ್ವ ಮತ್ತು ದಕ್ಷಿಣ-ಮಧ್ಯ ಭಾರತದ ಮಾವೋವಾದಿಗಳ ಅಡಗುತಾಣಗಳಲ್ಲಿ ತಮ್ಮ ವಿರೋಧಿಗಳಿಗೆ ಸವಾಲು ಹಾಕಲು ಸಿಎಪಿಎಫ್ ತನ್ನ ಧೈರ್ಯಶಾಲಿ 'ಸೈನಿಕರ'ನ್ನು ಎಲ್ಲಿ ಬೇಕಾದರೂ ನಿಯೋಜಿಸಬಹುದು.

ಮಹಿಳಾ ಸಿಬ್ಬಂದಿ ಈ ವರ್ಷದ ಜನವರಿಯಲ್ಲಿ ಶ್ವಾನ ನಿರ್ವಹಣೆಗೆ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಈ ವಾರಾಂತ್ಯದ ವೇಳೆಗೆ ಪ್ರಾಣಿಗಳ ಮೂಲಕ ಸಾಗಣೆಯ ತರಬೇತಿಯನ್ನು ಪೂರ್ಣಗೊಳಿಸಲಿದ್ದಾರೆ.

ಹರಿಯಾಣದ ಭಾನುನಿಯರ್ ಪಂಚಕುಲದಲ್ಲಿರುವ ಬೇಸಿಕ್ ಟ್ರೈನಿಂಗ್ ಸೆಂಟರ್ (BTC) ನಲ್ಲಿರುವ ITBP ನ್ಯಾಷನಲ್ ಟ್ರೈನಿಂಗ್ ಸೆಂಟರ್ ಫಾರ್ ಡಾಗ್ಸ್ (NTCD) ನಿಂದ ಹೊರಬಂದಿರುವ ತಮ್ಮ ನಿಷ್ಠಾವಂತ ಮಾಲಿನೋಯಿಸ್ (Malinois) ತಳಿಯ ಶ್ವಾನಗಳೊಂದಿಗೆ ಈಗ ಅವುಗಳನ್ನು ನಿಯೋಜಿಸಲಾಗುವುದು. ಈ ಶ್ವಾನಗಳಿಗೆ ಟಫಿ, ರೋನಿ, ಸ್ಪಾರ್ಕ್, ಆಕ್ಸಲ್, ಚಾರ್ಲಿ, ಜೂಲಿ, ಮೆರ್ರಿ ಮತ್ತು ಆನಿ ಎಂದು ಹೆಸರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ನ ಮಹಿಳಾ ಸಿಬ್ಬಂದಿಗೆ ಕುದುರೆಗಳ ನಿರ್ವಹಣೆ, ಕುದುರೆ ಸವಾರಿ, ಕುದುರೆಗಳಿಗೆ ಲೋಡ್ ಮಾಡುವ ತರಬೇತಿ ಮತ್ತು ಲೋಡೆಡ್ ಕುದುರೆಗಳ ಚಲನೆಯ ವಿವಿಧ ಅಂಶಗಳನ್ನು ಸಹ ಕಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾನುವಿನಲ್ಲಿರುವ ಐಟಿಬಿಪಿಯ ಮೂಲ ತರಬೇತಿ ಕೇಂದ್ರದ ಇನ್ಸ್‌ಪೆಕ್ಟರ್ ಜನರಲ್ ಈಶ್ವರ್ ಸಿಂಗ್ ದುಹಾನ್ ಮಾತನಾಡಿ, ಈ ಮೊದಲು ಈ ಮಹಿಳೆಯರನ್ನು ಐಟಿಬಿಪಿಯ ವೈದ್ಯಕೀಯ, ಕ್ಲೆರಿಕಲ್ ಮತ್ತು ಶಿಕ್ಷಣ ಕೇಡರ್‌ನಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು ಎಂದರು. 

'ಈ ಹೊಸ ಸೇರ್ಪಡೆಯಲ್ಲಿ ಪ್ರಾಣಿಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಿರುವ ತರಬೇತಿಯನ್ನು ನೀಡಲಾಗುತ್ತದೆ. ಈ ಮರಿಗಳಿಗೆ (ಶ್ವಾನ-ಸಣ್ಣ ಕುದುರೆ) ಆಜ್ಞೆಗಳನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಕಲಿಯಲು ಮೂರು ತಿಂಗಳ ತರಬೇತಿ ನೀಡಲಾಗುತ್ತದೆ. ಅಂತಿಮವಾಗಿ, ಅವರು ಮೂರು ತಿಂಗಳ ಕಾಲ ಸ್ಫೋಟಕ ಪತ್ತೆಯನ್ನು ಕಲಿಯುತ್ತಾರೆ. ಪ್ರತಿ ದಿನ ಕನಿಷ್ಠ ಆರು ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ' ಎಂದು ದುಹಾನ್ ಹೇಳಿದರು.

ಮಹಿಳೆಯರು ಹೆಚ್ಚು ಕಾಳಜಿ ಮತ್ತು ಪ್ರೀತಿಯಿಂದ ವರ್ತಿಸುವುದರಿಂದ ಶ್ವಾನಗಳು ಪುರುಷರಿಗಿಂತ ಹೆಚ್ಚು ಮಹಿಳೆಯರ ಧ್ವನಿ ಆಜ್ಞೆಯನ್ನು ಪಾಲಿಸಲು ಉತ್ಸುಕವಾಗಿವೆ ಎಂದು ಅಧಿಕಾರಿ ಹೇಳಿದರು.

ಪ್ರಾಣಿಗಳ ನಿರ್ವಹಣೆಯಲ್ಲಿ ನಮ್ಮ ಆತ್ಮವಿಶ್ವಾಸದ ಮಟ್ಟವು ಮಹತ್ತರವಾಗಿ ಹೆಚ್ಚಾಗಿದೆ. ಕಠಿಣ ತರಬೇತಿಯ ಮೂಲಕ ಮಾತ್ರ, ಕುದುರೆಯ ಭಯವನ್ನು ಹೋಗಲಾಡಿಸಲು ನಾವು ಕಲಿಯುತ್ತೇವೆ ಎಂದು ತರಬೇತಿನಿರತ ಕಾನ್ಸ್‌ಟೇಬಲ್ ಪ್ರತಿಭಾ ಹೇಳಿದರು. 

ನಾಯಿಗಳು ಮತ್ತು ಪ್ರಾಣಿಗಳ ತರಬೇತಿಗಾಗಿ ಈ ರಾಷ್ಟ್ರೀಯ ಕೇಂದ್ರವನ್ನು ಐಟಿಬಿಪಿ ಭಾನುದಲ್ಲಿ ಸ್ಥಾಪಿಸಿದ ನಂತರ ವಿವಿಧ ಪಡೆಗಳ ಸುಮಾರು 2,500 ನಾಯಿಗಳಿಗೆ ಇಲ್ಲಿ ತರಬೇತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com