'ಒಂದು ರಾಷ್ಟ್ರ, ಒಂದು ಹಾಲು' ಘೋಷಣೆ ಕೂಗಲು ಬಿಜೆಪಿಗೆ ಕಾಂಗ್ರೆಸ್ ಬಿಡುವುದಿಲ್ಲ: ಅಮುಲ್-ನಂದಿನಿ ವಿಚಾರವಾಗಿ ಜೈರಾಮ್ ರಮೇಶ್

ಅಮುಲ್ ಮತ್ತು ಕರ್ನಾಟಕ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿ ನಡುವೆ ಕೇಂದ್ರವು ಬಲವಂತದ ಸಹಕಾರವನ್ನು ಬಯಸುತ್ತಿದೆ. ಬಿಜೆಪಿಯು ಒಂದು ರಾಷ್ಟ್ರ, ಒಂದು ಹಾಲು ಎಂಬ ಘೋಷಣೆಯನ್ನು ಕೂಗಲು ಕಾಂಗ್ರೆಸ್ ಅನುಮತಿ ನೀಡುವುದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ.
ಜೈರಾಂ ರಮೇಶ್
ಜೈರಾಂ ರಮೇಶ್

ನವದೆಹಲಿ: ಅಮುಲ್ ಮತ್ತು ಕರ್ನಾಟಕ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿ ನಡುವೆ ಕೇಂದ್ರವು ಬಲವಂತದ ಸಹಕಾರವನ್ನು ಬಯಸುತ್ತಿದೆ. ಬಿಜೆಪಿಯು ಒಂದು ರಾಷ್ಟ್ರ, ಒಂದು ಹಾಲು ಎಂಬ ಘೋಷಣೆಯನ್ನು ಕೂಗಲು ಕಾಂಗ್ರೆಸ್ ಅನುಮತಿ ನೀಡುವುದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ.

ರಾಜ್ಯಗಳಲ್ಲಿನ ಡೈರಿ ಸಹಕಾರಿ ಸಂಘಗಳನ್ನು ನಿಯಂತ್ರಿಸುವ 'ನಿರ್ಲಜ್ಜ ಕ್ರಮ' ಇದಾಗಿದೆ. ರೈತರ ನಿಯಂತ್ರಣವಿರುವ ಸಹಕಾರಿಗಳ ನಿಯಂತ್ರಣವನ್ನು ತಾವು ಪಡೆದುಕೊಳ್ಳುವ ಬಿಜೆಪಿಯ ಪ್ರಯತ್ನಗಳನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ, ಅಮುಲ್ ಜೊತೆಗೆ ನಂದಿನಿಯನ್ನು ವಿಲೀನಗೊಳಿಸುವ ಆತಂಕವನ್ನು ಕಾಂಗ್ರೆಸ್ ವ್ಯಕ್ತಪಡಿಸಿದ್ದು, ಆಢಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ಬಿಜೆಪಿ ಈ ಆರೋಪವನ್ನು ಬಲವಾಗಿ ತಳ್ಳಿಹಾಕಿದೆ.

'ಒಂದು ರಾಷ್ಟ್ರ, ಒಂದು ಹಾಲು' ಎಂಬ ಘೋಷಣೆಯನ್ನು ಬಿಜೆಪಿ ಎತ್ತುವ ಸಮಯ ಬರಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಕರ್ನಾಟಕದಲ್ಲಿ ತನ್ನ ಚುನಾವಣಾ ಪ್ರಚಾರದಲ್ಲಿ ಮತ್ತು ದೇಶದಾದ್ಯಂತ ಈ ನಡೆಗಳ ಹಿಂದಿನ 'ಕೆಟ್ಟ ಅಜೆಂಡಾ'ವನ್ನು ಕಾಂಗ್ರೆಸ್ ಜನರಿಗೆ ವಿವರಿಸುತ್ತದೆ ಮತ್ತು ಸಾಧ್ಯವಿರುವ ಎಲ್ಲಾ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಅವುಗಳನ್ನು ವಿರೋಧಿಸಲು ನಿರ್ಧರಿಸುತ್ತದೆ ಎಂದು ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸಹಕಾರಿ ಸಂಘಗಳು ರಾಜ್ಯಗಳಿಗೆ ಸೇರಿದ ವಿಷಯ ಎಂದು ಸ್ಪಷ್ಟವಾಗಿ ತಿಳಿಸಿರುವ ಸಂವಿಧಾನವನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಕೆಎಂಎಫ್‌ನ ಮೆಗಾ ಡೈರಿ ಉದ್ಘಾಟನೆ ವೇಳೆ ಅಮಿತ್ ಶಾ ಅವರು, ಅಮುಲ್ ಮತ್ತು ನಂದಿನಿ ನಡುವಿನ ಸಹಕಾರದಿಂದ ಡೈರಿ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡಬಹುದು ಎಂದು ಹೇಳಿದ್ದರು.

ಗುಜರಾತ್ ಮೂಲದ ಅಮುಲ್ ತನ್ನ ಹಾಲು ಮತ್ತು ಮೊಸರನ್ನು ಪೂರೈಸಲು ಕರ್ನಾಟಕ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ಏಪ್ರಿಲ್ 5 ರಂದು ಘೋಷಿಸಿತು.

ಅಮುಲ್ ಮತ್ತು ನಂದಿನಿ ಎರಡೂ ಶ್ವೇತ ಕ್ರಾಂತಿಯ ರಾಷ್ಟ್ರೀಯ ಯಶಸ್ಸಿನ ಕಥೆಗಳು. ಇದು ಆನಂದ್‌ನಲ್ಲಿ ವರ್ಗೀಸ್ ಕುರಿಯನ್ ಅವರಿಂದ ಪ್ರಾರಂಭವಾಯಿತು ಮತ್ತು 1965ರಲ್ಲಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದಾಗ ಭಾರತದಾದ್ಯಂತ ಹರಡಿತು ಎಂದು ಹೇಳಿದರು.

ಡಾ. ಕುರಿಯನ್ ಅವರ ‘ನಾನು ರೈತನ ನೌಕರ’ ಎಂಬ ಮಂತ್ರದ ಮೂಲಕ ಪ್ರತಿ ರಾಜ್ಯದಲ್ಲೂ ಸಹಕಾರಿಗಳ ಜಾಲವು ಹೈನುಗಾರನನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ದಶಕಗಳಿಂದ ಈ ವಿಕೇಂದ್ರೀಕೃತ ದೃಷ್ಟಿಕೋನವನ್ನು ಪೋಷಿಸಲು ಕಾಂಗ್ರೆಸ್ ಸಹಾಯ ಮಾಡಿತು. ಕೋಟ್ಯಂತರ ಹೈನುಗಾರರಿಗೆ ಸ್ವಾಯತ್ತತೆ ಮತ್ತು ಬಲವನ್ನು ಖಾತ್ರಿಪಡಿಸಿದೆ ಎಂದು ಅವರು ಹೇಳಿದರು.

ಅಮಿತ್ ಶಾ ಮತ್ತು ಬಿಜೆಪಿಯು ಈ ಐತಿಹಾಸಿಕ ಸೊಸೈಟಿಗಳನ್ನು ಹೊಸ ಬಹು-ರಾಜ್ಯ ಸಹಕಾರಿ ಸಂಘಗಳಾಗಿ ಕ್ರೋಢೀಕರಿಸುವ ಮೂಲಕ ರೈತರ ನಿಯಂತ್ರಣವನ್ನು ತಮ್ಮ ನಿಯಂತ್ರಣದೊಂದಿಗೆ ಬದಲಾಯಿಸಲು ಬಯಸಿದೆ ಎಂದರು.

'ಬೆಂಗಳೂರು, ಭುವನೇಶ್ವರ, ಚೆನ್ನೈ ಅಥವಾ ಪುಣೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಸಹಕಾರ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದು ಡೈರಿ ರೈತರನ್ನು ದುರ್ಬಲಗೊಳಿಸುತ್ತದೆ ಮತ್ತು ಅಂತಿಮವಾಗಿ ಅವರ ಆದಾಯ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ರಮೇಶ್ ಹೇಳಿದರು.

'ಈ ಮಾದರಿಯನ್ನು ಈಗಾಗಲೇ ನೋಡಲಾಗಿದೆ. ಉದಾಹರಣೆಗೆ, ಕರ್ನಾಟಕದ ಅತ್ಯಂತ ಯಶಸ್ವಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿತು. ಹಾಗೆಯೇ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅನ್ನು ಎಸ್‌ಬಿಐ ಮತ್ತು ಕಾರ್ಪೊರೇಷನ್ ಬ್ಯಾಂಕ್‌ ಅನ್ನು ಯೂನಿಯನ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿತು ಎಂದು ದೂರಿದರು. 

ಕಾಂಗ್ರೆಸ್ ಯಾವಾಗಲೂ ಭಾರತದ ಒಕ್ಕೂಟ ಮತ್ತು ವಿಕೇಂದ್ರೀಕೃತ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಮತ್ತು 'ಅಮಿತ್ ಶಾ ಮತ್ತು ಬಿಜೆಪಿಯ ಕೇಂದ್ರೀಕೃತ ನಿಯಂತ್ರಣದ ಪ್ರಯತ್ನಗಳನ್ನು' ಬಲವಾಗಿ ವಿರೋಧಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com