71 ಸಾವಿರ ಯುವಕರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ರಾಷ್ಟ್ರೀಯ ರೋಜ್‌ಗಾರ್ ಮೇಳದಲ್ಲಿ 71,000 ಯುವಕರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ್ದು, ಸ್ಟಾರ್ಟಪ್‌ಗಳು ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಗುರುವಾರ ಹೇಳಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ರಾಷ್ಟ್ರೀಯ ರೋಜ್‌ಗಾರ್ ಮೇಳದಲ್ಲಿ 71,000 ಯುವಕರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ್ದು, ಸ್ಟಾರ್ಟಪ್‌ಗಳು ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಗುರುವಾರ ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿಯವರು 71 ಸಾವಿರಕ್ಕೂ ಅಧಿಕ ಹೊಸ ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಇದೇ ವೇಳೆ 2023ರ ಅಂತ್ಯದೊಳಗೆ 10 ಲಕ್ಷ ಮಂದಿಗೆ ಉದ್ಯೋಗ ಒದಗಿಸುವ ಭರವಸೆ ನೀಡಿದರು.

ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಟಿಯ ಆದ್ಯತೆಯ ಮೇರೆಗೆ ತನ್ನ ಬದ್ಧತೆಯನ್ನು ಈಡೇರಿಸಲು ಈ ಅಭಿಯಾನವು ಮುಂಚೂಣಿಯದ್ದಾಗಿದ್ದ,  ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ಮತ್ತು ಯುವಜನತೆಗೆ ಉತ್ತಮ ಅವಕಾಶ ಒದಗಿಸುವಲ್ಲಿ ದೇಶದ ಬೆಳವಣಿಗೆಯಲ್ಲಿ ನೇರವಾಗಿ ಭಾಗಿಯಾಗಲು, ಯುವಶಕ್ತಿಯನ್ನು ಸಶಕ್ತೀಕರಣಗೊಳಿಸಲು ಸಹಾಯವಾಗಲಿದೆ ಎಂದು ಹೇಳಿದರು.

ರಾಷ್ಟ್ರೀಯ ರೋಜ್‌ಗಾರ್ ಮೇಳವು ಯುವಕರ ಉತ್ಸಾಹವನ್ನು ಹೆಚ್ಚಿಸುವ ಮತ್ತು ಅವರಿಗೆ ಉದ್ಯೋಗಾವಕಾಶಗಳನ್ನು ನೀಡುವಲ್ಲಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. "ಸ್ಟಾರ್ಟ್‌ಅಪ್‌ಗಳು 40 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಇದು ಭಾರತದ ಚೇತರಿಸಿಕೊಳ್ಳುವ ಆರಂಭಿಕ ಬೆಳವಣಿಗೆಯನ್ನು ತೋರಿಸುತ್ತದೆ. ಇಂದು ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಇಂದಿನ ನವ ಭಾರತ ಅನುಸರಿಸುತ್ತಿರುವ ನೀತಿ ಮತ್ತು ತಂತ್ರವು ಹೊಸ ಆವಿಷ್ಕಾರ ಮತ್ತು ಅವಕಾಶಗಳನ್ನು ಒದಗಿಸುತ್ತಿವೆ ಎಂದು ತಿಳಿಸಿದರು.

ಇಂದು 70,000 ಕ್ಕೂ ಹೆಚ್ಚು ಯುವಕರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ, ಎನ್‌ಡಿಎ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗ ನೀಡುವ ಪ್ರಕ್ರಿಯೆಯು ತ್ವರಿತ ಗತಿಯಲ್ಲಿ ಸಾಗುತ್ತಿದೆ. ನಿನ್ನೆ ಮಧ್ಯಪ್ರದೇಶದಲ್ಲಿ 22 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ನೇಮಕಾತಿ ಪತ್ರ ನೀಡಲಾಯಿತು ಎಂದು ಹೇಳಿದರು.

ರಕ್ಷಣಾ ವಲಯದ ಅಭಿವೃದ್ಧಿಯನ್ನು ಪ್ರಸ್ತಾಪಿಸಿದ ಮೋದಿಯವರು, ಭಾರತವು 15,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಧನಗಳನ್ನು ರಫ್ತು ಮಾಡಿದೆ ಎಂದು ಹೇಳಿದರು.

"ರಕ್ಷಣಾ ಸಾಧನಗಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದು ಎಂಬುದು ನೀತಿಯಿತ್ತು. ನಮ್ಮದೇ ದೇಶದ ತಯಾರಕರ ಮೇಲೆ ನಮಗೆ ನಂಬಿಕೆ ಇರಲಿಲ್ಲ. ನಮ್ಮ ಸರ್ಕಾರವು ಈ ನೀತಿಯನ್ನು ಬದಲಾಯಿಸಿತು. ನಮ್ಮ ಸಶಸ್ತ್ರ ಪಡೆಗಳು ಅಂತಹ 300 ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಪಟ್ಟಿಯನ್ನು ಸಿದ್ಧಪಡಿಸಿವೆ. ಇವುಗಳನ್ನು ಭಾರತದಲ್ಲಿ ಮಾತ್ರ ತಯಾರಿಸಲಾಗುತ್ತದೆ, ಇಂದು ಭಾರತವು 15,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಡ್ರೋಣ್ ಗಳು ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆಯನ್ನು ವಿವರಿಸಿದ ಪ್ರಧಾನಿ ಮೋದಿಯವರು, ಯುವಕರು ಹೊಸ ಯುಗದ ತಂತ್ರಜ್ಞಾನಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

"ನವ ಭಾರತದ ಯುವಕರು ಡ್ರೋಣ್ ತಯಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಡ್ರೋಣ್ ಪೈಲಟ್‌ಗಳಾಗುತ್ತಿದ್ದಾರೆ. ದಶಕಗಳಿಂದ ನಮ್ಮ ಮಕ್ಕಳು ವಿದೇಶದಿಂದ ಆಮದು ಮಾಡಿಕೊಂಡ ಆಟಿಕೆಗಳೊಂದಿಗೆ ಆಟವಾಡುತ್ತಿದ್ದರು. ನಾವು ಸ್ಥಳೀಯ ಆಟಿಕೆ ಉದ್ಯಮವನ್ನು ಉತ್ತೇಜಿಸಲು ಪ್ರಾರಂಭಿಸಿದೆವು. ಇದು ನಮ್ಮ ಯುವ ಶಕ್ತಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಬಂಡವಾಳ ಹೂಡಿಕೆ ಮೂಲಸೌಕರ್ಯ ಯೋಜನೆಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಮತ್ತು ಯುವ ಶಕ್ತಿಗೆ ವೈವಿಧ್ಯಮಯ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.

ಬಳಿಕ ದೇಶದ ಆರೋಗ್ಯ ಕ್ಷೇತ್ರವನ್ನು ಶ್ಲಾಘಿಸಿದ ಮೋದಿಯವರು, ಇದು ಉದ್ಯೋಗ ಸೃಷ್ಟಿಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

ಬಂದರು ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿದೆ. ಆರೋಗ್ಯ ಕ್ಷೇತ್ರವೂ ಉದ್ಯೋಗ ಸೃಷ್ಟಿಗೆ ಅತ್ಯುತ್ತಮ ಉದಾಹರಣೆಯಾಗುತ್ತಿದೆ. ಪ್ರತಿಯೊಂದು ಮೂಲಸೌಕರ್ಯ ಯೋಜನೆಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಕೃಷಿ ವಲಯದಲ್ಲಿ ಕೃಷಿ ಯಾಂತ್ರೀಕರಣವು ಹೆಚ್ಚಿದ್ದು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ, 2014 ರವರೆಗೆ ಭಾರತದಲ್ಲಿ 74 ವಿಮಾನ ನಿಲ್ದಾಣಗಳು ಇದ್ದವು, ಈಗ 148 ವಿಮಾನ ನಿಲ್ದಾಣಗಳಿವೆ. ವಿಮಾನ ನಿಲ್ದಾಣಗಳ ಹೆಚ್ಚಳದಿಂದಾಗಿ, ಹೊಸ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಿವೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com