ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸರಿಗೆ ದೂರು

ವಿಲಕ್ಷಣ ಘಟನೆಯೊಂದರಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಅನ್ನು ಹರಿದಿದ್ದಕ್ಕಾಗಿ ನಾಯಿಯೊಂದರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಪೋಸ್ಟರ್ ಹರಿಯುತ್ತಿರುವ ನಾಯಿ
ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಪೋಸ್ಟರ್ ಹರಿಯುತ್ತಿರುವ ನಾಯಿ

ವಿಜಯವಾಡ: ವಿಲಕ್ಷಣ ಘಟನೆಯೊಂದರಲ್ಲಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಅನ್ನು ಹರಿದಿದ್ದಕ್ಕಾಗಿ ನಾಯಿಯೊಂದರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ವಿಜಯವಾಡದಲ್ಲಿ ಮನೆಯ ಗೋಡೆಯ ಮೇಲಿದ್ದ ಮುಖ್ಯಮಂತ್ರಿಗಳ ಪೋಸ್ಟರ್ ಅನ್ನು ನಾಯಿಯೊಂದು ಹರಿದು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮಹಿಳೆಯರ ಗುಂಪೊಂದು ಪೊಲೀಸರಿಗೆ ದೂರು ನೀಡಿದೆ.

ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತೆ ಎನ್ನಲಾದ ದಾಸರಿ ಉದಯಶ್ರೀ ಎಂಬುವವರು ವ್ಯಂಗ್ಯವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿಗೆ ಅವಮಾನ ಮಾಡಿರುವ ನಾಯಿ ಹಾಗೂ ಅದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇತರ ಕೆಲ ಮಹಿಳೆಯರೊಂದಿಗೆ ಒತ್ತಾಯಿಸಿದರು.

151 ವಿಧಾನಸಭಾ ಸ್ಥಾನಗಳನ್ನು ಗೆದ್ದಿರುವ ಜಗನ್ ಮೋಹನ್ ರೆಡ್ಡಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅಂತಹ ನಾಯಕನನ್ನು ನಾಯಿಯೊಂದು ಅವಮಾನಿಸಿದ್ದು, ರಾಜ್ಯದ ಆರು ಕೋಟಿ ಜನರಿಗೆ ನೋವುಂಟು ಮಾಡಿದೆ ಎಂದು ಸ್ಥಳೀಯ ದೂರದರ್ಶನ ಚಾನೆಲ್‌ಗಳಿಗೆ ತಿಳಿಸಿದರು.

ನಮ್ಮ ಪ್ರೀತಿಯ ಮುಖ್ಯಮಂತ್ರಿಯನ್ನು ಅವಮಾನಿಸಿದ ನಾಯಿ ಮತ್ತು ನಾಯಿಯ ಹಿಂದಿರುವವರನ್ನು ಬಂಧಿಸುವಂತೆ ನಾವು ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

ಈ ಹಿಂದೆ ಜಗನ್ ಮೋಹನ್ ರೆಡ್ಡಿ ಅವರ ಫೋಟೊ ಇರುವ ಸ್ಟಿಕ್ಕರ್ ಅನ್ನು ನಾಯಿಯೊಂದು ಹರಿದು ಹಾಕಿರುವ ವಿಡಿಯೋ ವೈರಲ್ ಆಗಿತ್ತು. ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ರಾಜ್ಯದಾದ್ಯಂತ ನಡೆಯುತ್ತಿರುವ ಸಮೀಕ್ಷೆಯ ಭಾಗವಾಗಿ ಜಗನಣ್ಣ ಮಾ ಭವಿಷ್ಯತು (ಜಗನ್ ಅಣ್ಣ ನಮ್ಮ ಭವಿಷ್ಯ) ಎಂಬ ಸ್ಟಿಕರ್ ಅನ್ನು ಮನೆಯೊಂದರ ಮೇಲೆ ಅಂಟಿಸಲಾಗಿದೆ.
ಹಲವಾರು ಟಿಡಿಪಿ ಬೆಂಬಲಿಗರು ತಮ್ಮ ಸಾಮಾಜಿಕ ಖಾತೆಗಳ ಮೂಲಕ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com