ಕರ್ನಾಟಕ- ರಾಜಸ್ಥಾನದಲ್ಲಿ ಅಭಿವೃದ್ಧಿಗೆ ಹಣದ ಕೊರತೆ; ಡಿಕೆ ಶಿವಕುಮಾರ್ ಹೇಳಿಕೆ ಉಲ್ಲೇಖಿಸಿ ಪ್ರಧಾನಿ ಮೋದಿ ವಾಗ್ದಾಳಿ
ಪುಣೆ: ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಕಾಂಗ್ರೆಸ್ ಸರ್ಕಾರಗಳನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡರು.
ಬೆಂಗಳೂರು ಅಭಿವೃದ್ಧಿಗೆ ತನ್ನ ಬಳಿ ಹಣವಿಲ್ಲ ಎಂದು ಕರ್ನಾಟಕ ಸರ್ಕಾರ ಒಪ್ಪಿಕೊಂಡಿದೆ. ಇದೇ ರೀತಿ ರಾಜಸ್ಥಾನದಲ್ಲಿಯೂ ಆಗಿದೆ. ಅಲ್ಲಿ ರಾಜ್ಯವು ದೊಡ್ಡ ಸಾಲದ ಸುಳಿಗೆ ಸಿಲುಕಿದೆ ಮತ್ತು ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಹೇಳಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಯನ್ನು ಪ್ರಧಾನಿ ಮೋದಿ ಟೀಕಿಸಿದ್ದಾರೆ.
ಪುಣೆಯಲ್ಲಿ ಎರಡು ಹೊಸ ಮೆಟ್ರೋ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ, 15,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದರು.
ಬೆಂಗಳೂರು ಜಾಗತಿಕ ಹೂಡಿಕೆದಾರರ ಕೇಂದ್ರ ಮತ್ತು ಐಟಿ ಹಬ್ ಆಗಿದೆ. ಆದರೆ, ಇಷ್ಟು ಕಡಿಮೆ ಸಮಯದಲ್ಲಿಯೇ ರಾಜ್ಯ ಸರ್ಕಾರದ ಖಾತರಿಗಳ ಘೋಷಣೆಯ ದುಷ್ಪರಿಣಾಮಗಳು ಕಂಡುಬರುತ್ತಿವೆ. ಯಾವುದೇ ಪಕ್ಷವು ತನ್ನ ಸ್ವಾರ್ಥಕ್ಕಾಗಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದರೆ ಅದರ ಭಾರವನ್ನು ಜನರೇ ಹೊರುತ್ತಾರೆ ಎಂದು ಮೋದಿ ಹೇಳಿದರು.
ರಾಜಸ್ಥಾನದಲ್ಲೂ ಇದೇ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಅಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಂತಿವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ