ಹರ್ಯಾಣ ಕೋಮು ಘರ್ಷಣೆ: ಗಲಭೆಯಲ್ಲಿ ನ್ಯಾಯಾಧೀಶೆ, ಅವರ 3 ವರ್ಷದ ಮಗು ಪವಾಡ ಸದೃಶ ಪಾರು

ಮಣಿಪುರ ಹಿಂಸಾಚಾರದ ಬೆನ್ನಲ್ಲೇ ಇತ್ತ ಹರ್ಯಾಣದ ನುಹ್ ನಲ್ಲಿ ನಡೆದಿದ್ದ ಕೋಮು ಗಲಭೆ ಹಿಂಸಾಚಾರದಲ್ಲಿ ಪವಾಡ ಸದೃಶ ರೀತಿಯಲ್ಲಿ ನ್ಯಾಯಾಧೀಶರು, ಅವರ 3 ವರ್ಷದ ಮಗು ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹರ್ಯಾಣ ಕೋಮು ಘರ್ಷಣೆ
ಹರ್ಯಾಣ ಕೋಮು ಘರ್ಷಣೆ
Updated on

ಗುರುಗ್ರಾಮ್: ಮಣಿಪುರ ಹಿಂಸಾಚಾರದ ಬೆನ್ನಲ್ಲೇ ಇತ್ತ ಹರ್ಯಾಣದ ನುಹ್ ನಲ್ಲಿ ನಡೆದಿದ್ದ ಕೋಮು ಗಲಭೆ ಹಿಂಸಾಚಾರದಲ್ಲಿ ಪವಾಡ ಸದೃಶ ರೀತಿಯಲ್ಲಿ ನ್ಯಾಯಾಧೀಶರು, ಅವರ 3 ವರ್ಷದ ಮಗು ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ.

ಜುಲೈ 31 ರಂದು ನಡೆದ ನುಹ್ ಹಿಂಸಾಚಾರದ ವೇಳೆ ಆಕ್ರೋಶಿತ ಗುಂಪಿನ ಕೈಗೆ ಸಿಲುಕಿದ್ದ ನ್ಯಾಯಾಧೀಶೆ ಅಂಜಲಿ ಜೈನ್ ಮತ್ತು ಅವರ 3 ವರ್ಷದ ಮಗು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಜಲಿ ಜೈನ್ ಅವರು ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು, ಆ ದಿನ ಏನಾಯಿತು ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಅಂದು ಗಲಭೆ ನಡೆದ ದಿನ ನ್ಯಾಯಾಧೀಶರು ಮತ್ತು ಅವರ ಮಗಳು ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಕಾರಿನಲ್ಲಿ ಅವರೊಂದಿಗೆ ಓರ್ವ ಶಸ್ತ್ರಸಜ್ಜಿತ ಗಾರ್ಡ್ ಕೂಡ ಇದ್ದರು. ಕಾರಿನಲ್ಲಿ ನಲ್ಹಾಡ್‌ನ SKM ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲವು ಔಷಧಿಗಳನ್ನು ಖರೀದಿಸಲು ಹೋಗಿದ್ದರು. ಅವರು ದೆಹಲಿ-ಅಲ್ವಾರ್ ರಸ್ತೆಯಲ್ಲಿ ಬಸ್ ನಿಲ್ದಾಣ ತಲುಪಿದಾಗ ಅಲ್ಲಿ ಅದಾಗಲೇ ಸುಮಾರು 150 ಮಂದಿ ಆಕ್ರೋಶಿತ ಜನರು ಅಲ್ಲಿ ಜಮಾಯಿಸಿ ಗಲಭೆ ನಡೆಸುತ್ತಿದ್ದರು. ಈ ವೇಳೆ ನ್ಯಾಯಾಧೀಶರ ಕಾರನ್ನು ನೋಡುತ್ತಲೇ ಕಾರಿನತ್ತ ಕಲ್ಲುಗಳನ್ನು ತೂರಿದ್ದಾರೆ. ಈ ವೇಳೆ ವಿಚಲಿತರಾದ ಅಂಜಲಿ ಜೈನ್ ಅವರು ಏನಾಗುತ್ತಿದೆ ಎಂದು ನೋಡುತ್ತಲೇ ಕಲ್ಲೊಂದು ಅವರ ಕಾರಿನ ಕನ್ನಡಿಯನ್ನು ಛಿದ್ರಗೊಳಿಸಿತು. ನೋಡ ನೋಡುತ್ತಲೇ ಕಾರಿನತ್ತ ಆಕ್ರೋಶಿ ಗುಂಪು ಬೆಂಕಿ ಎಸೆಯಲಾರಂಭಿಸಿತು. 

ಇದರಿಂದ ಭಯಭೀತ ಗೊಂಡ ಅಂಜಲಿ ಜೈನ್ ಅವರು ಕೂಡಲೇ ಹಿಂದೆ ಮುಂದೆ ನೋಡದೇ ಸಮೀಪದ ವರ್ಕ್ ಶಾಪ್ ಗೆ ಓಡಿ ಹೋಗಿ ರಕ್ಷಣೆ ಪಡೆದರು. ಕೆಲ ಹೊತ್ತಿನ ಬಳಿಕ ಗಲಾಟೆ ತಣ್ಣಗಾದ ಮೇಲೆ ವಿಷಯ ತಿಳಿದ ಸ್ಥಳೀಯ ವಕೀಲರು ಅಲ್ಲಿಗೆ ಬಂದು ನ್ಯಾಯಾಧೀಶರನ್ನು ಮತ್ತು ಅವರ ಮಗುವನ್ನು ರಕ್ಷಿಸಿ ಕರೆದೊಯ್ದರು. ಬಳಿಕ ಘಟನಾ ಸ್ಥಳಕ್ಕೆ ತಾವು ಆಗಮಸಿದಾಗ ನಮ್ಮ ಕಾರು ಸುಟ್ಟು ಕರಕಲಾಗಿತ್ತು. ಒಂದು ವೇಳೆ ಕಾರಿನಲ್ಲೇ ಇದ್ದಿದ್ದರೆ ನಮ್ಮ ಸ್ಥಿತಿ ಏನಾಗಿರುತ್ತಿತ್ತು ಎಂಬುದನ್ನು ನೆನೆಸಿಕೊಂಡರು ಮೈ ನಡುಗುತ್ತದೆ ಎಂದು ನ್ಯಾಯಾಧೀಶೆ ಅಂಜಲಿ ಜೈನ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಘಟನೆ ಸಂಬಂಧ ಅಂಜಲಿ ಜೈನ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹರಿಯಾಣ ಪೊಲೀಸರು ಐಪಿಸಿ ಸೆಕ್ಷನ್ 148 (ಗಲಭೆ), 149 (ಕಾನೂನುಬಾಹಿರ ಸಭೆ), 435 (ಹಾನಿ ಉಂಟುಮಾಡುವ ಉದ್ದೇಶದಿಂದ ಬೆಂಕಿ ಅಥವಾ ಸ್ಫೋಟಕ ವಸ್ತುಗಳಿಂದ ಕಿಡಿಗೇಡಿತನ), 307 (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಇನ್ನು ಹರ್ಯಾಣ ಗಲಭೆಗೆ ಸಂಬಂಧಿಸಿದಂತೆ ಈ ವರೆಗೂ ಹರ್ಯಾಣ ಪೊಲೀಸರು ಜೈ ಭಾರತ್ ಮಾತಾ ವಾಹಿನಿಯ ಮುಖ್ಯಸ್ಥ ದಿನೇಶ್ ಭಾರ್ತಿ ಸೇರಿದಂತೆ ಕನಿಷ್ಠ 50 ಜನರನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com