ಹರ್ಯಾಣ ಹಿಂಸಾಚಾರ: ಗಲಭೆಕೋರರೇ ಆಸ್ತಿ ನಷ್ಟ ತುಂಬಬೇಕು- ಸಿಎಂ ಖಟ್ಟರ್ ಎಚ್ಚರಿಕೆ
ಚಂಡೀಗಢ: ನೂಹ್ ಹಿಂಸಾಚಾರದಲ್ಲಿ ಪಾಲ್ಗೊಂಡ ಗಲಭೆಕೋರರೇ ಆಸ್ತಿ ನಷ್ಟ ತುಂಬಬೇಕು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಎಚ್ಚರಿಕೆ ನೀಡಿದ್ದಾರೆ.
ಹರ್ಯಾಣದ ನೂಹ್ ಜಿಲ್ಲೆಯ ಕೋಮು ಗಲಭೆಯಲ್ಲಿ ಆದ ಆಸ್ತಿ ಪಾಸ್ತಿ ನಷ್ಟಕ್ಕೆ ಹಿಂಸಾಚಾರದಲ್ಲಿ ತೊಡಗಿರುವವರನ್ನು ಜವಾಬ್ದಾರರನ್ನಾಗಿ ಮಾಡುತ್ತೇವೆ.ಹಿಂಸಾಚಾರ ತೊಡಗಿರುವವರನ್ನು ಖಾಸಗಿ ಆಸ್ತಿಗಳ ಎಲ್ಲಾ ನಷ್ಟಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುವುದು. ಸರ್ಕಾರಿ ಆಸ್ತಿಗಳ ನಷ್ಟವನ್ನು ಸರ್ಕಾರವೇ ಭರಿಸುತ್ತದೆ. ಸರ್ಕಾರಿ ಆಸ್ತಿಯ ನಷ್ಟಕ್ಕೆ ಸರ್ಕಾರ ಪರಿಹಾರವನ್ನು ಒದಗಿಸುತ್ತದೆ. ಆದರೆ, ಖಾಸಗಿ ಆಸ್ತಿಗೆ ಸಂಬಂಧಿಸಿದಂತೆ ನಷ್ಟಕ್ಕೆ ಅದನ್ನು ಉಂಟುಮಾಡಿದವರೇ ಜವಾಬ್ದಾರರಾಗಿರುತ್ತಾರೆ. ನಾವು ಇಂತಹ ಒಂದು ಕಾಯಿದೆಯನ್ನು ಅಂಗೀಕರಿಸಿದ್ದೇವೆ ಎಂದು ಮನೋಹರ್ ಲಾಲ್ ಖಟ್ಟರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸಾರ್ವಜನಿಕ ಶಾಂತಿಗೆ ಮತ್ತು ಕಾನೂನು ಸುವ್ಯವಸ್ಥೆಗೆ ಅಡಚಣೆ ಸಮಯದಲ್ಲಿ ಆದ ಆಸ್ತಿ ಹಾನಿಯ ತುಂಬುವಿಕೆ ಕಾಯಿದೆ, 2021ರ ಪ್ರಕಾರ, ಸಾರ್ವಜನಿಕ ಅಶಾಂತಿಯ ಸಮಯದಲ್ಲಿ ಉಂಟಾದ ಖಾಸಗಿ ಆಸ್ತಿಗಳ ಹಾನಿಗಳಿಗೆ ಪರಿಹಾರ ಕೋರಿ ಆಸ್ತಿಯ ಮಾಲೀಕರು ಮನವಿ ಸಲ್ಲಿಸಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಒಡೆತನದ ಆಸ್ತಿಗಳಿಗೆ ಉಂಟಾಗುವ ಯಾವುದೇ ಹಾನಿಗಳಿಗೆ ಪರಿಹಾರಕ್ಕಾಗಿ ಕ್ಲೈಮ್ ಅನ್ನು ನಿರ್ದಿಷ್ಟ ಕಚೇರಿಯ ಮುಖ್ಯಸ್ಥರು ಸಲ್ಲಿಸಬೇಕು. ಹಿಂಸಾಚಾರದಲ್ಲಿ ತೊಡಗಿದ್ದ ಪ್ರತಿಯೊಬ್ಬ ತಪ್ಪಿತಸ್ಥನನ್ನು ಕಾನೂನಿನ ಅಡಿ ಶಿಕ್ಷಿಸಲಾಗುವುದು. ಅಲ್ಲದೆ, ಹಿಂಸಾಚಾರದ ಸಮಯದಲ್ಲಿ ಉಂಟಾದ ಪ್ರತಿಯೊಂದು ಹಾನಿಯನ್ನು ಗಲಭೆಕೋರರು ತುಂಬಿಕೊಡಬೇಕು ಎಂದು ಖಟ್ಟರ್ ಹೇಳಿದ್ದಾರೆ.
‘ಯಾವುದೇ ಬೆಲೆತೆತ್ತಾದರೂ ಸರಿ ರಾಜ್ಯದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದ ಹದಗೆಡಲು ಬಿಡುವುದಿಲ್ಲ. ನೂಹ್ ಘಟನೆಯ ಪ್ರತಿಯೊಬ್ಬ ಅಪರಾಧಿಯನ್ನು ಕಾನೂನಿನ ಮೂಲಕ ಶಿಕ್ಷಿಸಲಾಗುವುದು. ಅಲ್ಲಿ ಸಂಭವಿಸಿದ ಪ್ರತಿಯೊಂದು ಹಾನಿಯನ್ನು ಗಲಭೆಕೋರರು ತುಂಬಿಕೊಡಬೇಕು’ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ