
ಲಖನೌ: ಮುಸ್ಲಿಂ ಯುವಕನೋರ್ವ ಹಿಂದೂ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋದ ನಂತರ ಗುಂಪೊಂದು ಯುವಕನ ತಂದೆ-ತಾಯಿಯನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಂದಿದೆ ಎಂದು ಹೇಳಲಾಗಿದೆ. ಬಾಲಕಿಯು ಹಲ್ಲೆಕೋರರಲ್ಲಿ ಒಬ್ಬನ ಮಗಳಾಗಿದ್ದಾಳೆ ಎಂದು ವರದಿಯಾಗಿದೆ.
ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಶುಕ್ರವಾರ ದಂಪತಿ ಮೇಲೆ ದಾಳಿ ನಡೆಸಲಾಗಿದ್ದು, ಉತ್ತರ ಪ್ರದೇಶದ ಸೀತಾಪುರ ನಿವಾಸಿಗಳಾದ ಅಬ್ಬಾಸ್ ಮತ್ತು ಕಮರುಲ್ ನಿಶಾ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕೆಲವು ವರ್ಷಗಳ ಹಿಂದೆ ಅಬ್ಬಾಸ್ ಅವರ ಮಗ ಶೌಕತ್ ಅನ್ಯ ಧರ್ಮದ ಅಪ್ರಾಪ್ತ ಬಾಲಕಿ ರೂಬಿ ಎಂಬಾಕೆಯೊಂದಿಗೆ ಓಡಿ ಹೋಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶೌಕತ್‌ನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಹೇಳಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ನಡುವೆ ಶೌಕತ್ ಕೆಲ ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದು, ಬಾಲಕಿಯ ಮನೆಯವರು ಆತನ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು.
ಶುಕ್ರವಾರ, ಸೀತಾಪುರದ ರಾಜೇಪುರದಲ್ಲಿ ದಂಪತಿ ತಮ್ಮ ಮನೆಯಲ್ಲಿದ್ದಾಗ, ಐವರಿದ್ದ ಗುಂಪೊಂದು ಮನೆಗೆ ನುಗ್ಗಿ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಹರಗಾಂವ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಮುಂದುವರಿದಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ. ಗುಂಪು ಹತ್ಯೆಯ ವಿರುದ್ಧ ಮಸೂದೆಯನ್ನು ಅಂಗೀಕರಿಸಿದ ಕೆಲವೇ ರಾಜ್ಯಗಳಲ್ಲಿ ರಾಜಸ್ಥಾನವೂ ಸೇರಿದೆ.
ರಾಂಪುರ ಪ್ರದೇಶದ ಅರಣ್ಯದಲ್ಲಿ ಅಕ್ರಮವಾಗಿ ಮರ ಕಡಿಯುತ್ತಿದ್ದಾರೆ ಎಂಬ ಶಂಕೆ ಮೇಲೆ ಗುಂಪೊಂದು ದಾಳಿ ನಡೆಸಿದಾಗ 27 ವರ್ಷದ ವಾಸಿಂ ಸಾವಿಗೀಡಾಗಿದ್ದು, ಆತನ ಇಬ್ಬರು ಸಹಚರರು ಗಾಯಗೊಂಡಿದ್ದಾರೆ.
Advertisement