ಬಾಲಕಿ ಮೇಲೆ ದೆಹಲಿ ಹಿರಿಯ ಅಧಿಕಾರಿ ಅತ್ಯಾಚಾರ: ಗರ್ಭಪಾತದ ಮಾತ್ರೆ ನೀಡಿದ ಆರೋಪಿ ಪತ್ನಿ!
ನವದೆಹಲಿ: ಉತ್ತರ ದೆಹಲಿಯ ಬುರಾರಿಯಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ 2020 ರಿಂದ 2021ರ ನಡುವೆ ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ತನ್ನ ಹೆಂಡತಿಯ ಸಹಾಯದಿಂದಲೇ ಪದೇ ಪದೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕೃತ್ಯದಲ್ಲಿ ಆರೋಪಿಯ ಪತ್ನಿಯೂ ಆತನಿಗೆ ನೆರವು ನೀಡಿದ್ದರಿಂದ ಮತ್ತು ಪೊಲೀಸರಿಗೆ ವಿಷಯ ತಿಳಿಸದ ಕಾರಣ ಆಕೆಯ ವಿರುದ್ಧ ಸೆಕ್ಷನ್ 120-ಬಿ (ಅಪರಾಧ ಸಂಚು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂತ್ರಸ್ತೆ ಹನ್ನೆರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆ ಆರೋಪಿಯನ್ನು ಚರ್ಚ್‌ನಲ್ಲಿ ಭೇಟಿಯಾಗಿದ್ದಳು. 2020ರಲ್ಲಿ, ಸಂತ್ರಸ್ತೆಯ ತಂದೆ ನಿಧನರಾದ ಬಳಿಕ ಆಕೆ ಖಿನ್ನತೆಗೆ ಒಳಗಾಗಿದ್ದಳು.
ಆರೋಪಿ ಆಕೆಯೊಂದಿಗೆ ಸ್ನೇಹ ಬೆಳೆಸಿ, ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. 'ಅತ್ಯಂತ ಆಘಾತಕಾರಿ ಅಂಶವೆಂದರೆ, ಬಾಲಕಿ ಗರ್ಭಿಣಿಯಾಗಿದ್ದಾಳೆ. ಈ ವೇಳೆ ಆರೋಪಿ ಆಕೆಗೆ ಬೆದರಿಕೆಯೊಡ್ಡಿದ್ದಾನೆ. ಸಂತ್ರಸ್ತೆ ಆರೋಪಿಯ ಹೆಂಡತಿಗೆ ವಿಚಾರ ತಿಳಿಸಿದಾಗ, ಆಕೆಯು ಸಹಾಯ ಮಾಡುವ ಬದಲು, ಆಕೆಗೆ ಗರ್ಭಪಾತ ಮಾಡಿಸಿದ್ದಾರೆ. ಮಹಿಳೆ ತನ್ನ ಮಗನನ್ನು ಕಳುಹಿಸಿ ಗರ್ಭಪಾತದ ಮಾತ್ರೆಗಳನ್ನು ತರಿಸಿದ್ದಳು' ಎಂದು ಮೂಲಗಳು ತಿಳಿಸಿವೆ.
ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಪೊಲೀಸರು ಆಕೆಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಬಳಿಗೆ ಕರೆದೊಯ್ಯುತ್ತಾರೆ.
ಆರೋಪಿ ಮತ್ತು ಆತನ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 376(2)(ಎಫ್), 506, 509, 323, 313, 120ಬಿ, ಮತ್ತು 34 ಮತ್ತು ಪೊಕ್ಸೊ ಕಾಯ್ದೆಯ ಸೆಕ್ಷನ್ 6/21 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ