ಉತ್ತರ ಪ್ರದೇಶ: ರೌಡಿ ಶೀಟರ್ ಬಂಧಿಸಲು ಹೋದ ಪೊಲೀಸರ ಮೇಲೆ ಕುಟುಂಬಸ್ಥರಿಂದ ಗುಂಡಿನ ದಾಳಿ, ಪೇದೆ ಸಾವು

ರೌಡಿ ಶೀಟರ್‌ನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಆರೋಪಿಯ ಕುಟುಂಬಸ್ಥರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಪೊಲೀಸ್ ಪೇದೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕನೌಜ್‌: ರೌಡಿ ಶೀಟರ್‌ನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಆರೋಪಿಯ ಕುಟುಂಬಸ್ಥರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಪೊಲೀಸ್ ಪೇದೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ವಿಷುಂಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪೊಲೀಸ್ ಪೇದೆ ಸಚಿನ್ ರಾಠಿ (28) ಅವರಿಗೆ ಗುಂಡು ತಗುಲಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪೊಲೀಸರು ಆರೋಪಿ ಅಶೋಕ್ ಕುಮಾರ್ ಅಲಿಯಾಸ್ ಮುನ್ನಾ ಯಾದವ್ ಮತ್ತು ಆತನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರನ್ನೂ ಕನೌಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶೋಕ್ ಕುಮಾರ್ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ 20 ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಇದೆ ಎಂದು ಎಸ್ಪಿ ತಿಳಿಸಿದ್ದಾರೆ.

ಅಶೋಕ್ ಕುಮಾರ್ ತನ್ನ ಮನೆಯಲ್ಲಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ನಂತರ ಛಿಬ್ರಮೌ ಮತ್ತು ವಿಶುಂಗಢ ಪೊಲೀಸ್ ಠಾಣೆಯ ಪೊಲೀಸ್ ತಂಡ ಜಂಟಿಯಾಗಿ ಮನೆಗೆ ಮುತ್ತಿಗೆ ಹಾಕಿದೆ. ಧರಣಿ ಧೀರ್‌ಪುರ ನಗರಿಯ ಗ್ರಾಮಕ್ಕೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ ತಕ್ಷಣವೇ ಕುಮಾರ್, ಅವರ ಪತ್ನಿ ಮತ್ತು ಮಗ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆನಂದ್ ಸುದ್ದಿಗಾರರಿಗೆ ತಿಳಿಸಿದರು.

ಈ ವೇಳೆ ಕಾನ್‌ಸ್ಟೆಬಲ್ ಸಚಿನ್ ರಾಠಿ ಅವರ ತೊಡೆಯ ಭಾಗಕ್ಕೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ಅವರು ತಡರಾತ್ರಿ ಮೃತಪಟ್ಟರು ಎಂದು ಅವರು ಹೇಳಿದರು.

ರೌಡಿ ಶೀಟರ್ ಮತ್ತು ಅವರ ಮಗನನ್ನು ಕನೌಜ್‌ನಲ್ಲಿರುವ ತಿರ್ವಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಕುಮಾರ್ ಮತ್ತು ಆತನ ಪುತ್ರನಿಂದ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮನೆಯಲ್ಲಿ ತಪಾಸಣೆ ನಡೆಸಿದಾಗ ಡಬಲ್ ಬ್ಯಾರಲ್ ರೈಫಲ್ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com