ವಂದೇ ಮೆಟ್ರೋ ಯೋಜನೆ ಸಿದ್ಧಪಡಿಸುವಂತೆ ರೈಲ್ವೆಗೆ ಪ್ರಧಾನಿ ಮೋದಿ ಸೂಚನೆ
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲುಗಳಂತೆಯೇ, ಹತ್ತಿರದ ಎರಡು ದೊಡ್ಡ ನಗರಗಳ ನಡುವೆ ಸಂಚರಿಸುವ 'ವಂದೇ ಮೆಟ್ರೋ' ಎಂಬ ರೈಲು ಯೋಜನೆ ರೂಪಿಸುವಂತೆ ರೈಲ್ವೆ ಸಚಿವಾಲಯಕ್ಕೆ ಸೂಚಿಸಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಹೈದರಾಬಾದ್‌ನಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ರೈಲ್ವೆ ಕಳೆದ ವರ್ಷ ಆಹಾರ ಧಾನ್ಯಗಳು, ರಸಗೊಬ್ಬರಗಳು ಮತ್ತು ಇತರ ಅನೇಕ ವಸ್ತುಗಳ ಸಾಗಣೆಯಲ್ಲಿ 59,000 ಕೋಟಿ ರೂಪಾಯಿ ಸಬ್ಸಿಡಿ ನೀಡಿದೆ. ಇದು ಪ್ರತಿ ಪ್ರಯಾಣಿಕರಿಗೆ ಶೇಕಡಾ 55 ರಷ್ಟು ರಿಯಾಯಿತಿಗೆ ಸಮಾನವಾಗಿದೆ ಎಂದು ಹೇಳಿದ್ದಾರೆ.
"ವಂದೇ ಭಾರತ್ ರೈಲಿನ ಯಶಸ್ಸಿನ ನಂತರ, ಹೊಸ ವಿಶ್ವ ದರ್ಜೆಯ ಪ್ರಾದೇಶಿಕ ರೈಲನ್ನು ಅಭಿವೃದ್ಧಿಪಡಿಸಲು ವಂದೇ ಮೆಟ್ರೋಗೆ ಯೋಜನೆ ರೂಪಿಸುವಂತೆ ಪ್ರಧಾನಿ ಮೋದಿ ಈ ವರ್ಷ ಟಾರ್ಗೆಟ್ ನೀಡಿದ್ದಾರೆ" ಎಂದರು.
ಮುಂದಿನ 12 ರಿಂದ 16 ತಿಂಗಳೊಳಗೆ ವಂದೇ ಮೆಟ್ರೋ ಮೂಲಮಾದರಿಯೊಂದಿಗೆ ಬನ್ನಿ ಎಂದು ಪ್ರಧಾನಿ ಮೋದಿ ಗಡುವು ನೀಡಿದ್ದಾರೆ. ವಂದೇ ಮೆಟ್ರೋ ತಲಾ 100 ಕಿಮೀಗಿಂತ ಕಡಿಮೆ ದೂರವಿರುವ ಎರಡು ನಗರಗಳ ನಡುವೆ ಓಡಿಸಲಾಗುತ್ತದೆ ಎಂದರು.
ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವಿನ ವಂದೇ ಭಾರತ್ ರೈಲು ಸುಮಾರು ಶೇ. 120 ರಷ್ಟು ಆಕ್ಯುಪೆನ್‌ಸಿಯೊಂದಿಗೆ ಉತ್ತಮವಾಗಿ ಓಡುತ್ತಿದೆ. ಇದು ತೆಲಂಗಾಣದಲ್ಲಿ ಹೆಚ್ಚಿನ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಪರಿಚಯಿಸಲು ರೈಲ್ವೆ ಇಲಾಖೆಗೆ ಪ್ರೇರೇಪಿಸಿದೆ ಎಂದು ಸಚಿವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ