ಹೈದರಾಬಾದ್: ಅಸ್ಸಾಂ ಸರ್ಕಾರ ಬಾಲ್ಯವಿವಾಹಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ನಂತರ ಅನಾಥವಾಗಿರುವ ಹೆಣ್ಣು ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ಮೌನವಾಗಿದ್ದ ಅಸ್ಸಾಂ ಸರ್ಕಾರ ಈಗ ಬಾಲ್ಯ ವಿವಾಹ ಪ್ರಕರಣದಲ್ಲಿ 2,044 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ. ಆದರೆ ಆ ಹೆಣ್ಣು ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದರು.
ಇದನ್ನು ಓದಿ: ಅಸ್ಸಾಂ: ಬಾಲ್ಯ ವಿವಾಹ ಪ್ರಕರಣದಲ್ಲಿ 2,044 ಮಂದಿಯ ಬಂಧನ
ರಾಜ್ಯ ಪೊಲೀಸರು ಹಿಂದಿನ ದಿನ ಪ್ರಾರಂಭಿಸಿದ ಬಾಲ್ಯವಿವಾಹದ ವಿರುದ್ಧದ ಅಭಿಯಾನವು ಮುಂದಿನ 2026ರ ವಿಧಾನಸಭಾ ಚುನಾವಣೆಯವರೆಗೆ ಮುಂದುವರಿಯುತ್ತದೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.
"ಕಳೆದ ಆರು ವರ್ಷಗಳಿಂದ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಕಳೆದ ಆರು ವರ್ಷಗಳಿಂದ ನೀವು ಏನು ಮಾಡುತ್ತಿದ್ದೀರಿ? ಕಳೆದ ಆರು ವರ್ಷಗಳಿಂದ ಇದು ನಿಮ್ಮ ವೈಫಲ್ಯವನ್ನು ತೋರಿಸುತ್ತಿದೆ. ನೀವು ಅವರನ್ನು ಜೈಲಿಗೆ ಕಳುಹಿಸುತ್ತಿದ್ದೀರಿ, ಈಗ ಆ ಹೆಣ್ಣುಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ. ಆ ಹುಡುಗಿಯರನ್ನು ಸಿಎಂ (ಹಿಮಂತ ಬಿಸ್ವ ಶರ್ಮಾ) ನೋಡಿಕೊಳ್ಳುತ್ತಾರಾ? ಆ ಮದುವೆ ಮುರಿದು ಬಿಳುತ್ತಾ?. ನಿಮ್ಮ ವೈಫಲ್ಯದಿಂದ ಹೆಣ್ಣುಮಕ್ಕಳನ್ನು ದುಸ್ಥಿತಿಗೆ ತಳ್ಳುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಅಸ್ಸಾಂ ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, ಬಾಲ್ಯವಿವಾಹ ತಡೆ ಪ್ರಕರಣದಲ್ಲಿ ಶನಿವಾರದವರೆಗೆ 2,250 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
Advertisement