ಅದಾನಿ ವಿಚಾರದ ತನಿಖೆಗೆ ಒತ್ತಾಯಿಸಿ ಸಂಸತ್ ಆವರಣದಲ್ಲಿ ಪ್ರತಿಪಕ್ಷಗಳ ಸಂಸದರಿಂದ ಪ್ರತಿಭಟನೆ
ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸೋಮವಾರ ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
Published: 06th February 2023 12:21 PM | Last Updated: 06th February 2023 07:03 PM | A+A A-

ಸಂಸತ್ ಭವನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಅದಾನಿ ವಿಚಾರವಾಗಿ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದರು.
ನವದೆಹಲಿ: ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸೋಮವಾರ ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಕಲಾಪ ಆರಂಭವಾದ ಕೂಡಲೇ ಈ ವಿಷಯದ ಬಗ್ಗೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನಲ್ಲಿ ಧರಣಿ ನಡೆಸಿದ ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ತಮ್ಮ ಜಂಟಿ ಕಾರ್ಯತಂತ್ರವನ್ನು ಸಂಘಟಿಸಲು ಸೋಮವಾರ ಬೆಳಿಗ್ಗೆ ನಡೆದ ಸಭೆಯ ನಂತರ ವಿವಿಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ, ಬಿಆರ್‌ಎಸ್, ಜೆಡಿಯು, ಎಸ್‌ಪಿ, ಸಿಪಿಎಂ, ಸಿಪಿಐ, ಜೆಎಂಎಂ, ಆರ್‌ಎಲ್‌ಡಿ, ಆರ್‌ಎಸ್‌ಪಿ, ಎಎಪಿ, ಐಯುಎಂಎಲ್, ರ್‌ಜೆಡಿ ಮತ್ತು ಶಿವಸೇನೆ ಪಕ್ಷಗಳು ಭಾಗವಹಿಸಿದ್ದವು.
ತೃಣಮೂಲ ಕಾಂಗ್ರೆಸ್ ಸದಸ್ಯರು ಪ್ರತಿಪಕ್ಷ ನಾಯಕರ ಸಭೆಯನ್ನು ಬಿಟ್ಟು ಸಂಸತ್ತಿನ ಆವರಣದ ಗಾಂಧಿ ಪ್ರತಿಮೆ ಎದುರು ವಿರೋಧ ಪಕ್ಷದ ನಾಯಕರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ಅದಾನಿ ಗ್ರೂಪ್ ನ ನಷ್ಟ ಯಾವುದೇ ವ್ಯಕ್ತಿ ಅಥವಾ ಜನರ ಸಂಪತ್ತಿನ ನಷ್ಟವಲ್ಲ: ಪಿಯೂಷ್ ಗೋಯಲ್
ಅದಾನಿ ಹಗರಣದ ಬಗ್ಗೆ ಜೆಪಿಸಿ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ನಾವು ಒತ್ತಾಯಿಸುತ್ತೇವೆ ಎಂಬ ಬ್ಯಾನರ್ ಅನ್ನು ಎತ್ತಿ ಹಿಡಿದ ವಿರೋಧ ಪಕ್ಷದ ಸಂಸದರು, ಘೋಷಣೆಗಳನ್ನು ಕೂಗಿದರು.
ನಮ್ಮ ನೋಟಿಸ್‌ಗಳ ಮೇಲೆ ಚರ್ಚೆಗೆ ನಾವು ಒತ್ತಾಯಿಸುತ್ತೇವೆ, ನಾವು ವಿವರವಾದ ಚರ್ಚೆಗೆ ಸಿದ್ಧರಿದ್ದೇವೆ. ರಾಷ್ಟ್ರಪತಿಗಳ ಭಾಷಣದ ಮೇಲೆ ಪ್ರತಿಪಕ್ಷಗಳು ಮಾತನಾಡಲು ಸಿದ್ಧವಾಗಿವೆ. ಆದರೆ, ಅದಾನಿ ವಿಷಯವನ್ನು ಮೊದಲು ಕೈಗೆತ್ತಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು ಎಂಬುದು ಪ್ರತಿಪಕ್ಷಗಳ ಮೊದಲ ಬೇಡಿಕೆಯಾಗಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದು ಮತ್ತು ಚರ್ಚೆ ಮಾಡುವುದು ಸರ್ಕಾರಕ್ಕೆ ಇಷ್ಟವಿಲ್ಲ. ಇದರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಅವರು ಬಯಸುತ್ತಿದ್ದಾರೆ ಎಂದು ಖರ್ಗೆ ಪ್ರತಿಪಾದಿಸಿದರು.
ಸಾರ್ವಜನಿಕ ವಲಯದ ಎಲ್‌ಐಸಿ ಮತ್ತು ಎಸ್‌ಬಿಐ ಹೂಡಿಕೆ ಮಾಡಿರುವುದರಿಂದ ಅದಾನಿ ಗ್ರೂಪ್ ಷೇರುಗಳ ಇತ್ತೀಚಿನ ಮೌಲ್ಯ ಕುಸಿಯುತ್ತಿರುವುದು ಸಾಮಾನ್ಯ ಜನರ ಹಣವನ್ನು ಒಳಗೊಂಡಿರುವ ಹಗರಣವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.