ಲೋಕಸಭೆಯಲ್ಲಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

ಲೋಕಸಭೆಯಲ್ಲಿ ಮಾಡಿದ ಕೆಲವು ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವುಗಳನ್ನು ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬುಧವಾರ ಒತ್ತಾಯಿಸಿದ್ದಾರೆ.
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ
Updated on

ನವದೆಹಲಿ: ಲೋಕಸಭೆಯಲ್ಲಿ ಮಾಡಿದ ಕೆಲವು ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವುಗಳನ್ನು ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬುಧವಾರ ಒತ್ತಾಯಿಸಿದ್ದಾರೆ.

ಮಂಗಳವಾರ ಸದನದಲ್ಲಿ ಗಾಂಧಿಯವರು ಮಾಡಿದ ಕೆಲವು ಟೀಕೆಗಳನ್ನು ಈಗಾಗಲೇ ದಾಖಲೆಗಳಿಂದ ಹೊರಹಾಕಲಾಗಿದೆ.

ಕಲಾಪ ಆರಂಭವಾಗುತ್ತಲೇ, ಜೋಶಿ ಅವರು ಸಂಸತ್ತಿನ ನಿಯಮಗಳ ಅಡಿಯಲ್ಲಿ ಯಾರೊಬ್ಬರ ವಿರುದ್ಧ ಆರೋಪ ಮಾಡಲು ಬಯಸಿದರೆ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ನಿನ್ನೆ ಕೆಲವು ಟೀಕೆಗಳನ್ನು ಮಾಡಿದ್ದಾರೆ. ಅವು ಅತ್ಯಂತ ಆಕ್ಷೇಪಾರ್ಹ ಮತ್ತು ಆಧಾರರಹಿತ ಆರೋಪಗಳಾಗಿವೆ. ಅವುಗಳನ್ನು ತೆಗೆದುಹಾಕಬೇಕು ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಹೇಳಿದರು.

ರಾಹುಲ್ ಗಾಂಧಿಯವರ ಹೇಳಿಕೆಗಾಗಿ ವಿಶೇಷ ಹಕ್ಕುಚ್ಯುತಿ ಮಂಡಿಸಲಾಗುವುದು. ಈಗಾಗಲೇ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆಯಾದರೂ, ಅದು ದೃಢೀಕರಣಗೊಂಡಿಲ್ಲ  ಎಂದು ಸಚಿವರು ಹೇಳಿದರು.

ಆದರೆ, ಸ್ಪೀಕರ್ ತಕ್ಷಣ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಈ ಬಗ್ಗೆ ಪರಿಶೀಲನೆ ನಡೆಸಿ ತೀರ್ಮಾನಿಸುವುದಾಗಿ ಹೇಳಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಉದ್ಯಮಿ ಗೌತಮ್ ಅದಾನಿ ಕಂಪನಿಗಳು ಮತ್ತು ವೈಯಕ್ತಿಕ ಸಂಪತ್ತು ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ.

ಅದಾನಿ ಕುರಿತಾಗಿ ಹಿಂಡೆನ್‌ಬರ್ಗ್ ವರದಿಯನ್ನು ಉಲ್ಲೇಖಿಸಿ ಮಂಗಳವಾರ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ ರಾಹುಲ್, 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೌತಮ್ ಅದಾನಿ ಅವರು ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡರು. ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 609 ನೇ ಸ್ಥಾನದಿಂದ ಅಂತಿಮವಾಗಿ ಎರಡನೇ ಸ್ಥಾನಕ್ಕೆ ಏರಿದರು ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ರಾಹುಲ್‌ ಮಾತಿಗೆ ಆಡಳಿತ ಪಕ್ಷದ ಕಡೆಯಿಂದ ತೀಕ್ಷ್ಣವಾದ ವಿರೋಧವೂ ವ್ಯಕ್ತವಾಯಿತು. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಸುಖಾ ಸುಮ್ಮನೆ ಆರೋಪಗಳನ್ನು ಮಾಡಬಾರದು. ಪುರಾವೆ ಒದಗಿಸಿ ಎಂದು ಆಗ್ರಹಿಸಿದರು. 

ಸಂಸತ್ತಿನ ಹೊರಗೆ, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು, ರಾಹುಲ್ ಗಾಂಧಿಯವರು ಆಧಾರರಹಿತ, ನಿರ್ಲಜ್ಜ ಮತ್ತು ಅಜಾಗರೂಕ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವು ದೊಡ್ಡ ಹಗರಣಗಳಲ್ಲಿ ಭಾಗಿಯಾಗಿದ್ದು, ದೇಶದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಆರೋಪಿಸಿದರು.

ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ತಿಳಿಸಲು ಉದ್ಯಮಿಯ ವಿಮಾನದಲ್ಲಿ ಅದಾನಿ ಜೊತೆಗಿದ್ದ ಪ್ರಧಾನಿ ಮೋದಿ ಚಿತ್ರವನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದಕ್ಕೂ ಸ್ಪೀಕರ್ ಓಂ ಬಿರ್ಲಾ ಅಸಮ್ಮತಿ ಸೂಚಿಸಿದರು.

'ನೀವು ಪೋಸ್ಟರ್‌ಗಳನ್ನು ತೋರಿಸಿದರೆ, ಅವರು (ಬಿಜೆಪಿ) ರಾಜಸ್ಥಾನ ಮುಖ್ಯಮಂತ್ರಿಯ (ಅದಾನಿ ಜೊತೆ) ಪೋಸ್ಟರ್‌ಗಳನ್ನು ತೋರಿಸುತ್ತಾರೆ. ಸಂಸತ್ತು ಇರುವುದು ಇಂತಹ ವಿಷಯಗಳಿಗಾಗಿ ಅಲ್ಲ' ಎಂದು ಬಿರ್ಲಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com