'ಸಂಪೂರ್ಣವಾಗಿ ತಪ್ಪಾದ ಗ್ರಹಿಕೆ': ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಕುರಿತ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ದೇಶದಲ್ಲಿ ಸಂಪೂರ್ಣವಾಗಿ ಬಿಬಿಸಿಗೆ ನಿಷೇಧ ಹೇರಬೇಕು ಎಂದು ಕೋರಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದ್ದು, ಇದು ಸಂಪೂರ್ಣ ತಪ್ಪು ಕಲ್ಪನೆ ಎಂದು ಹೇಳಿದೆ.
ಈ ಸಂಬಂಧ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಮತ್ತು ರೈತ ಬೀರೇಂದ್ರ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
“ಇದು ಸಂಪೂರ್ಣವಾಗಿ ತಪ್ಪಾದ ಕಲ್ಪನೆಯಾಗಿದೆ. ನೀವು ಇದನ್ನು ಹೇಗೆ ವಾದಿಸಬಹುದು? ಇದನ್ನು ನಿಷೇಧಿಸಲು ನೀವು ನ್ಯಾಯಾಲಯವನ್ನು ಕೇಳುತ್ತೀರಾ? ಸಾಕ್ಷ್ಯಚಿತ್ರ ಬದಲಾವಣೆ ತರುತ್ತದೆ ಎಂದು ನೀವು ಭಾವಿಸುತ್ತೀರಾ? ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅರ್ಜಿದಾರರನ್ನು ಪ್ರಶ್ನಿಸಿದರು. ಅರ್ಜಿಯು ಸಂಪೂರ್ಣವಾಗಿ ತಪ್ಪಿನಿಂದ ಕೂಡಿದ್ದು, ಯಾವುದೇ ಅರ್ಹತೆ ಇಲ್ಲ, ಹೀಗಾಗಿ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
2002ರಲ್ಲಿ ಸಂಭವಿಸಿದ್ದ ಗುಜರಾತ್ ಹಿಂಸಾಚಾರ ಕುರಿತ ಇಂಡಿಯಾ ದಿ ಮೋದಿ ಕ್ವಶ್ಚನ್ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿ ಅರ್ಜಿದಾರರು ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿದರು. ಬಿಬಿಸಿ ಸತ್ಯಕ್ಕೆ ದೂರವಾದ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಮೇಲೆ ದಾಳಿ ಮಾಡುವ ಪಟ್ಟಭದ್ರ ಹಿತಾಸಕ್ತಿ ಹೊಂದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧಿಸುವ ನಿರ್ಧಾರಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ನೀಡುವಂತೆ ಫೆಬ್ರವರಿ 3 ರಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.ವಿವಾದಾತ್ಮಕ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ನಿರ್ಬಂಧಿಸುವಂತೆ ಯೂಟ್ಯೂಬ್ ಮತ್ತು ಟ್ವಿಟರ್ ಗಳಿಗೆ ಜನವರಿ 21 ರಂದು ಕೇಂದ್ರ ಸರ್ಕಾರ ನಿರ್ದೇಶನಗಳನ್ನು ನೀಡಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ