ದಕ್ಷಿಣ ಆಫ್ರಿಕಾದಿಂದ ಭಾರತದ ಗ್ವಾಲಿಯರ್‌ಗೆ ಇನ್ನೂ 12 ಚಿರತೆಗಳ ಆಗಮನ!
ಗ್ವಾಲಿಯರ್: ದಕ್ಷಿಣ ಆಫ್ರಿಕಾದಿಂದ ತರಲಾಗುತ್ತಿರುವ 12 ಚಿರತೆಗಳು ಭಾರತಕ್ಕೆ ಬಂದಿವೆ. ಭಾರತೀಯ ವಾಯುಪಡೆಯ C-17 Globemaster ಕಾರ್ಗೋ ವಿಮಾನವು ಈ ಚಿರತೆಗಳನ್ನು ಹೊತ್ತುಕೊಂಡು ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಬಂದಿಳಿದಿದೆ. ಇಲ್ಲಿಂದ ಈ ಚಿರತೆಗಳನ್ನು ಹೆಲಿಕಾಪ್ಟರ್ ಮೂಲಕ ಕುನೊಗೆ ಕರೆದೊಯ್ಯಲಾಗುತ್ತದೆ.
ಅಲ್ಲಿ ಕೆಲ ದಿನಗಳ ಕಾಲ ಸಣ್ಣ ಆವರಣದಲ್ಲಿ ಇರಿಸಿ ನಂತರ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ನಂತರ ಬಯಲು ಅರಣ್ಯಕ್ಕೆ ಬಿಡಲಾಗುವುದು. ಕುನೊ ತಲುಪಿದ ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಈ ಚಿರತೆಗಳನ್ನು ಸ್ವಾಗತಿಸಿ ಆವರಣದಲ್ಲಿ ಬಿಡುತ್ತಾರೆ.
ಚೀತಾ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಪ್ರಕಾರ, ದಕ್ಷಿಣ ಆಫ್ರಿಕಾದಿಂದ ತರಲಾಗುತ್ತಿರುವ ಈ ಚಿರತೆಗಳಲ್ಲಿ ಏಳು ಗಂಡು ಮತ್ತು ಐದು ಹೆಣ್ಣು ಚಿರತೆಗಳು ಸೇರಿವೆ. ಮೊದಲು ಸೆಪ್ಟೆಂಬರ್ 2020ರಲ್ಲಿ, ನಮೀಬಿಯಾದಿಂದ ಎಂಟು ಚಿರತೆಗಳನ್ನು ತರಲಾಗಿತ್ತು. ಈ ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು.
ಇಂತಹ ಪರಿಸ್ಥಿತಿಯಲ್ಲಿ, 12 ಹೊಸ ಚಿರತೆಗಳ ಆಗಮನದ ನಂತರ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸಂಖ್ಯೆ 20ಕ್ಕೆ ಏರುತ್ತದೆ. ಗಮನಾರ್ಹವಾಗಿ, 1952ರಲ್ಲಿ ಚಿರತೆಗಳು ಭಾರತದ ನೆಲದಿಂದ ನಿರ್ನಾಮವಾದವು ಎಂದು ಘೋಷಿಸಲಾಯಿತು. ಪರಿಸರ ವ್ಯವಸ್ಥೆಯನ್ನು ಸಮತೋಲನಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರವು ಈ ಹಿಂದೆ ಆಫ್ರಿಕನ್ ದೇಶಗಳಿಂದ ಚಿರತೆಗಳನ್ನು ತರಲು ಯೋಜನೆಯನ್ನು ಸಿದ್ಧಪಡಿಸಿತ್ತು.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿಯ ಯೋಜನೆಯಿಂದಾಗಿ 71 ವರ್ಷಗಳ ನಂತರ ಮತ್ತೊಮ್ಮೆ ಭಾರತ ಭೂಮಿ ಚಿರತೆಗಳಿಂದ ತುಂಬಿದೆ. ಇದು ದೇಶದ ವನ್ಯಜೀವಿ ಇತಿಹಾಸದಲ್ಲಿ ಹೊಸ ಯುಗದ ಆರಂಭ ಎಂದು ನಂಬಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ