290ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್'ನಲ್ಲಿ ತುರ್ತು ಭೂಸ್ಪರ್ಶ
ಸುಮಾರು 290ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.
Published: 22nd February 2023 02:27 PM | Last Updated: 22nd February 2023 02:27 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಸುಮಾರು 290ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.
ತಾಂತ್ರಿಕ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಮೆರಿಕದ ನೆವಾರ್ಕ್‌ನಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ಬರುತ್ತಿದ್ದ ವಿಮಾನ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಬೋಯಿಂಗ್ 777-300ER ವಿಮಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ AI106 ವಿಮಾನವು ಇಂಜಿನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣದಿಂದ ಆ ವಿಮಾನವನ್ನು ಡೈವರ್ಟ್ ಮಾಡಿ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಗಿದೆ. ಅದೃಷ್ಟವಶಾತ್, ಈ ವಿಮಾನದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯ ಅಗ್ನಿಶಾಮಕ ವಾಹನಗಳನ್ನು ವಿಮಾನ ನಿಲ್ದಾಣದಲ್ಲಿ ಇರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಪರಿಶೀಲನೆಯ ಸಮಯದಲ್ಲಿ, ಎಂಜಿನ್ ಎರಡರ ಡ್ರೈನ್ ಮಾಸ್ಟ್‌ನಿಂದ ತೈಲ ಹೊರಬರುತ್ತಿರುವುದು ಕಂಡುಬಂದಿದೆ, ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಯುಎಸ್‌ನ ನೆವಾರ್ಕ್‌ನಿಂದ ಹೊರಟಿದ್ದ ವಿಮಾನವನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಸ್ವೀಡನ್‌ನ ಸ್ಟಾಕ್‌ಹೋಮ್‌ಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ, ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಲಂಡನ್‌ಗೆ ತಿರುಗಿಸಲಾಯಿತು.