ರಾಹುಲ್ ಗಾಂಧಿ 'ಶೋಭೆ' ಈ ವರ್ಷ ಮುಂದುವರಿದರೆ 2024ರಲ್ಲಿ ರಾಜಕೀಯ ಬದಲಾವಣೆ ಸಾಧ್ಯತೆ: ಸಂಜಯ್ ರಾವತ್

ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಹೊಸ ಹೊಳಪು ದಕ್ಕಿದೆ ಮತ್ತು 2023ರಲ್ಲಿ ಈ ಪ್ರವೃತ್ತಿ ಮುಂದುವರಿದರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೇಶವು ರಾಜಕೀಯ ಬದಲಾವಣೆಯನ್ನು ಕಾಣಬಹುದು ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನಾ ನಾಯಕ ಸಂಜಯ್ ರಾವುತ್ ಭಾನುವಾರ ತಿಳಿಸಿದ್ದಾರೆ.
ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ: ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಹೊಸ ಹೊಳಪು ದಕ್ಕಿದೆ ಮತ್ತು 2023ರಲ್ಲಿ ಈ ಪ್ರವೃತ್ತಿ ಮುಂದುವರಿದರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೇಶವು ರಾಜಕೀಯ ಬದಲಾವಣೆಯನ್ನು ಕಾಣಬಹುದು ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನಾ ನಾಯಕ ಸಂಜಯ್ ರಾವುತ್ ಭಾನುವಾರ ತಿಳಿಸಿದ್ದಾರೆ.

ಸೇನಾ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ರೋಖ್‌ಥೋಕ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ದ್ವೇಷ ಮತ್ತು ವಿಭಜನೆಯ ಬೀಜಗಳನ್ನು' ಬಿತ್ತಬಾರದು ಎಂದಿದ್ದಾರೆ.

'ರಾಮ ಮಂದಿರ ವಿವಾದ ಇತ್ಯರ್ಥಗೊಂಡಿದ್ದು, ಈ ವಿಚಾರದಲ್ಲಿ ಮತ ಕೇಳಲು ಸಾಧ್ಯವಿಲ್ಲ. ಹೀಗಾಗಿ, ಹೊಸದಾಗಿ 'ಲವ್ ಜಿಹಾದ್' ದೃಷ್ಟಿಕೋನವನ್ನು ಅನ್ವೇಷಿಸಲಾಗುತ್ತಿದೆ. ‘ಲವ್ ಜಿಹಾದ್’ ಎಂಬ ಅಸ್ತ್ರವನ್ನು ಚುನಾವಣೆ ಗೆಲ್ಲಲು ಮತ್ತು ಹಿಂದೂಗಳಲ್ಲಿ ಭಯ ಹುಟ್ಟಿಸಲು ಬಳಸಲಾಗುತ್ತಿದೆಯೇ?' ಎಂದು ಪ್ರಶ್ನಿಸಿದರು.

ಕಳೆದ ತಿಂಗಳು ನಟಿ ತುನಿಷಾ ಶರ್ಮಾ ಅವರ ಸಾವು ಮತ್ತು ಆಕೆಯ ಗೆಲೆಯನಿಂದ ಶ್ರದ್ಧಾ ವಾಲ್ಕರ್ ಅವರ ಹತ್ಯೆಯನ್ನು ಉಲ್ಲೇಖಿಸಿದ ರಾವುತ್, ಇವು ಲವ್ ಜಿಹಾದ್ ಪ್ರಕರಣಗಳಲ್ಲ. ಆದರೆ, ಯಾವುದೇ ಸಮುದಾಯ ಅಥವಾ ಧರ್ಮದ ಯಾವುದೇ ಮಹಿಳೆಗೆ ದೌರ್ಜನ್ಯವಾಗಬಾರದು ಎಂದು ಸಮರ್ಥಿಸಿಕೊಂಡಿದ್ದಾರೆ.

'2023 ರಲ್ಲಿ ದೇಶವು ಭಯದಿಂದ ಮುಕ್ತವಾಗಲಿದೆ. ಈಗ ಏನು ನಡೆಯುತ್ತಿದೆಯೋ ಅದು ಅಧಿಕಾರ ರಾಜಕಾರಣ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಲಿ ಮತ್ತು ಅದರ ಉದ್ದೇಶವನ್ನು ಸಾಧಿಸಲಿ ಎಂದು ಹಾರೈಸುತ್ತೇನೆ' ಎಂದು ರಾವತ್ ಹೇಳಿದರು.

2022ರ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಯಿತು. ಇದು ಈ ತಿಂಗಳ ಅಂತ್ಯದಲ್ಲಿ ಶ್ರೀನಗರದಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.
2022ರ ವರ್ಷವು ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಹೊಸ ಹೊಳಪು ಮತ್ತು ಹುರುಪನ್ನು ನೀಡಿದೆ. 2023ರಲ್ಲೂ ಇದೇ ರೀತಿ ಮುಂದುವರಿದರೆ, 2024ರಲ್ಲಿ (ಲೋಕಸಭಾ ಚುನಾವಣೆ) ರಾಜಕೀಯ ಬದಲಾವಣೆಯನ್ನು ಕಾಣಬಹುದಾಗಿದೆ ಎಂದು ರಾವುತ್ ಹೇಳಿದ್ದಾರೆ.

'ನಾವು ಸಂಕುಚಿತ ಮನೋಭಾವವನ್ನು ತೊಡೆದುಹಾಕಬೇಕು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ವಾಸ್ತವವೆಂದರೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಆಡಳಿತದಲ್ಲಿ ಈ ಮನೋಭಾವ ಬೆಳೆದಿದೆ. ಇಂದಿನ ಆಡಳಿತಗಾರರು ವಿರೋಧ ಪಕ್ಷಗಳ ಅಸ್ತಿತ್ವ ಮತ್ತು ಹಕ್ಕುಗಳನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ' ಎಂದು ಹೇಳಿದರು.

ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಒಡಕು ಮೂಡಿಸುವುದು ಹೊಸ ವಿಭಜನೆಗೆ ಕಾರಣವಾಗುತ್ತದೆ. ಮೋದಿ ಮತ್ತು ಶಾ ದ್ವೇಷ ಮತ್ತು ವಿಭಜನೆಯ ಬೀಜಗಳನ್ನು ಬಿತ್ತಬಾರದು. ಹಿಂದೂಗಳನ್ನು ಜಾಗೃತಗೊಳಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ. ಆದರೆ, ಇದರರ್ಥ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಸೃಷ್ಟಿಸುವುದು ಎಂದಲ್ಲ. ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆಗಳನ್ನು ಪಕ್ಕಕ್ಕೆ ತಳ್ಳಲಾಗಿದೆ ಎಂದು ಹೇಳುತ್ತಾ ಸರ್ಕಾರವನ್ನು ಗುರಿಯಾಗಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com