ಗುಜರಾತ್ ಎಎಪಿಗೆ ಮೇಜರ್ ಸರ್ಜರಿ: ಸಿಎಂ ಅಭ್ಯರ್ಥಿ ಇಸುದನ್ ಗಧ್ವಿಗೆ ರಾಜ್ಯಾಧ್ಯಕ್ಷ ಪಟ್ಟ, ಇಟಾಲಿಯಾಗೆ ರಾಷ್ಟ್ರೀಯ ಜವಾಬ್ದಾರಿ!

ಗುಜರಾತ್ ವಿಧಾನಸಭಾ ಚುನಾವಣೆ ಬಳಿಕ ಆಮ್ ಆದ್ಮಿ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಸಿಎಂ ಅಭ್ಯರ್ಥಿ ಇಸುದನ್ ಗಧ್ವಿ, ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಸೇರಿದಂತೆ ಪಕ್ಷದ ಇಡೀ ಸಂಘಟನೆಯ ಮೇಲುಸ್ತುವಾರಿಗಳನ್ನು ಬದಲಿಸಲಾಗಿದೆ.
ಇಸುದನ್ ಗಧ್ವಿ
ಇಸುದನ್ ಗಧ್ವಿ

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ಬಳಿಕ ಆಮ್ ಆದ್ಮಿ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಸಿಎಂ ಅಭ್ಯರ್ಥಿ ಇಸುದನ್ ಗಧ್ವಿ, ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಸೇರಿದಂತೆ ಪಕ್ಷದ ಇಡೀ ಸಂಘಟನೆಯ ಮೇಲುಸ್ತುವಾರಿಗಳನ್ನು ಬದಲಿಸಲಾಗಿದೆ.

ಗುಜರಾತ್ ಚುನಾವಣೆಯಲ್ಲಿ ತನ್ನ ಪೂರ್ಣ ಬಲದೊಂದಿಗೆ ಹೋರಾಡಿದ್ದ ಆಮ್ ಆದ್ಮಿ ಪಕ್ಷವು ಪಕ್ಷದ ಪ್ರಮುಖ ನಾಯಕರ ಜವಾಬ್ದಾರಿಗಳನ್ನು ಮತ್ತು ಹುದ್ದೆಗಳನ್ನು ಬದಲಿಸಿದ್ದು, ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದ ಇಸುದನ್ ಗಧ್ವಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಅಂತೆಯೇ ಚುನಾವಣೆ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಗೋಪಾಲ್ ಇಟಾಲಿಯಾ ಅವರನ್ನು ರಾಷ್ಟ್ರೀಯ ಸೇವೆಗೆ ನಿಯೋಜಿಸಲಾಗಿದ್ದು, ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಇಟಾಲಿಯಾ ಅವರಿಗೆ ಮಹಾರಾಷ್ಟ್ರದ ಸಹ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿದೆ.

ಈ ಹಿಂದೆ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಇದೇ ಗೋಪಾಲ್ ಇಟಾಲಿಯಾ ಅವರ ಹಳೆಯ ವಿಡಿಯೋಗಳು ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದವು. ಗೋಪಾಲ್ ಇಟಾಲಿಯಾ ಅವರ ನೇತೃತ್ವದಲ್ಲಿ ಎಎಪಿ ಪಕ್ಷವು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತು. ಈ ಮೂಲಕ ಐದು ಸ್ಥಾನಗಳೊಂದಿಗೆ ಪಕ್ಷವು ಶೇಕಡಾ 13 ರಷ್ಟು ಮತಗಳನ್ನು ಪಡೆದುಕೊಂಡು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆದುಕೊಂಡಿತ್ತು. ಗೋಪಾಲ್ ಇಟಾಲಿಯಾ ರಾಜ್ಯಾಧ್ಯಕ್ಷರಾಗಿದ್ದಾಗಲೇ ಇಸುದನ್ ಗಧ್ವಿ ಪತ್ರಿಕೋದ್ಯಮ ತೊರೆದು ರಾಜಕೀಯಕ್ಕೆ ಸೇರಿದ್ದರು. ಇಸುದನ್ ಗಧ್ವಿ ಅವರು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಮುಖ ಸ್ಟಾರ್ ನಾಯಕರಾಗಿದ್ದರು. ಆದರೆ ಅವರು ದ್ವಾರಕಾದ ಖಂಭಾಲಿಯಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸೋತರು. 

ಉಳಿದಂತೆ ಪಕ್ಷದ ಪುನಾರಚನೆಯಲ್ಲಿ ಪಾಟಿದಾರ್ ನಾಯಕ ಅಲ್ಪೇಶ್ ಕಥಿರಿಯಾ ಮತ್ತು ದೇಡಿಯಾಪಾದದಿಂದ ಚುನಾವಣೆಯಲ್ಲಿ ಗೆದ್ದು ಪ್ರಚಾರದಲ್ಲಿದ್ದ ಶಾಸಕ ಚೈತಾರ್ ವಾಸವ ಅವರ ಸ್ಥಾನವನ್ನು ಪಕ್ಷವು ಹೆಚ್ಚಿಸಿದ್ದು, ಅಲ್ಪೇಶ್ ಕಥಿರಿಯಾ ಅವರನ್ನು ಸೂರತ್ ಸೇರಿದಂತೆ ರಾಜ್ಯದ ನಾಲ್ಕೂ ವಲಯಗಳಲ್ಲಿ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದಕ್ಷಿಣ ಗುಜರಾತ್ ವಲಯದ ಉಸ್ತುವಾರಿಯನ್ನು ಚೈತರ್ ವಾಸವಾಗೆ, ಸೌರಾಷ್ಟ್ರ ವಲಯದ ಉಸ್ತುವಾರಿಯನ್ನು ಜಗ್ಮಲ್ ವಾಲಾ ನೀಡಲಾಗಿದೆ. ಅಂತೆಯೇ ಉತ್ತರ ಗುಜರಾತ್‌ನ ಜವಾಬ್ದಾರಿಯನ್ನು ಡಾ. ರಮೇಶ್ ಪಟೇಲ್‌ಗೆ, ಮಧ್ಯ ಗುಜರಾತ್‌ನ ಜವಾಬ್ದಾರಿಯನ್ನು ಜ್ಯುವೆಲ್ ವಸ್ರಾ ಮತ್ತು ಕಚ್ ವಲಯದ ಉಸ್ತುವಾರಿಯನ್ನು ಕೈಲಾಶ್ ಗಧ್ವಿಗೆ ವಹಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಜಯ ಲಭಿಸಿದ್ದು, ಆಪ್ ಸಂಘಟನೆಯಲ್ಲಿ ಪುನಾರಚನೆಯಾಗುವ ಊಹಾಪೋಹ ಎದ್ದಿತ್ತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಐದು ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ 17 ಸ್ಥಾನಗಳನ್ನು ಮತ್ತು ಆಡಳಿತಾರೂಢ ಬಿಜೆಪಿ 156 ಸ್ಥಾನಗಳನ್ನು ಪಡೆದು ಮತ್ತೆ  ಸರ್ಕಾರ ರಚನೆ ಮಾಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com