ಟಿಎಂಸಿ ಶಾಸಕ ಜಾಕೀರ್ ಹುಸೇನ್ ಮನೆ ಮೇಲೆ ಐಟಿ ದಾಳಿ: 11 ಕೋಟಿ ರೂ. ವಶ!
ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕ ಹಾಗೂ ಜಂಗಿಪುರದ ಮಾಜಿ ಸಚಿವ ಜಾಕೀರ್ ಹುಸೇನ್ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು ಬರೋಬ್ಬರಿ 11 ಕೋಟಿ ರುಪಾಯಿಯನ್ನು ವಶಪಡಿಸಿಕೊಂಡಿದೆ.
Published: 13th January 2023 01:10 AM | Last Updated: 13th January 2023 01:13 AM | A+A A-

ಸಂಗ್ರಹ ಚಿತ್ರ
ಕೋಲ್ಕತ್ತಾ(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕ ಹಾಗೂ ಜಂಗಿಪುರದ ಮಾಜಿ ಸಚಿವ ಜಾಕೀರ್ ಹುಸೇನ್ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು ಬರೋಬ್ಬರಿ 11 ಕೋಟಿ ರುಪಾಯಿಯನ್ನು ವಶಪಡಿಸಿಕೊಂಡಿದೆ.
ಜಂಗೀಪುರದ ಹುಸೇನ್ ಅವರ ಮನೆ, ಕಚೇರಿ, ಗೋದಾಮು, ಕಾರ್ಖಾನೆ ಹಾಗೂ ದೆಹಲಿ ಮತ್ತು ಕೋಲ್ಕತ್ತಾದಲ್ಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು ಈವರೆಗೆ ಒಟ್ಟು 11 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ.
ಹೊಸೈನ್ ಅವರು ಮುರ್ಷಿದಾಬಾದ್‌ನ ಜಂಗಿಪುರದ ಶಾಸಕರಾಗಿದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಕಿರಿಯ ಕಾರ್ಮಿಕ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ದಾಳಿ ಬಗ್ಗೆ ಮಾತನಾಡಿದ ಹುಸೇನ್, ನನ್ನ ವ್ಯಾಪಾರ ಸಂಸ್ಥೆಗಳಲ್ಲಿ ಸುಮಾರು 7,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ವೇತನವನ್ನು ನಗದು ರೂಪದಲ್ಲಿ ಪಾವತಿಸಲಾಗುತ್ತದೆ. ವಶಪಡಿಸಿಕೊಂಡ ಹಣವನ್ನು ಕಾರ್ಮಿಕರು ಮತ್ತು ರೈತರಿಗೆ ಪಾವತಿಸಲು ಇಡಲಾಗಿತ್ತು. ನಾವು ಐಟಿ ಅಧಿಕಾರಿಗಳಿಗೆ ದಾಖಲೆಗಳನ್ನು ತೋರಿಸಿದ್ದೇವೆ ಎಂದರು.
ತೃಣಮೂಲ ಕಾಂಗ್ರೆಸ್ ಐಟಿಯ ಕ್ರಮವನ್ನು ಬಿಜೆಪಿಯ ಪೂರ್ವ ಯೋಜಿತ ಪಿತೂರಿಯ ಭಾಗವೆಂದು ಬಣ್ಣಿಸಿದೆ. ಹುಸೇನ್ ಒಬ್ಬ ಸುಸ್ಥಾಪಿತ ಉದ್ಯಮಿ ಅವರನ್ನು ಬೇಕಂತಲೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
20 ವಾಹನಗಳಲ್ಲಿ ದಾಳಿಗೆ ಬಂದ ಅಧಿಕಾರಿಗಳು
ಎಲ್ಲ ಕಡೆ ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆಯ ಸುಮಾರು 20 ವಾಹನಗಳು ಆಗಮಿಸಿದ್ದವು. ಕೆಲವು ಬೀಡಿ ವ್ಯಾಪಾರಿಗಳ ಸ್ಥಳಗಳ ಮೇಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಹುಸೇನ್ ಅವರ ಮ್ಯಾನೇಜರ್ ಮನೆಯಲ್ಲೂ ಶೋಧ ನಡೆಸಲಾಗಿದೆ. ಕೋಲ್ಕತ್ತಾದ ನಾಲ್ಕು ಸ್ಥಳಗಳಲ್ಲಿ ಐಟಿ ದಾಳಿ ನಡೆಸಲಾಗಿದೆ. ತೆರಿಗೆ ವಂಚನೆ ಆರೋಪದ ನಂತರ ಐಟಿ ಈ ದೊಡ್ಡ ಕ್ರಮ ಕೈಗೊಂಡಿದೆ.