
ಇಂಡಿಗೋ ವಿಮಾನ ಮತ್ತು ತೇಜಸ್ವಿ ಸೂರ್ಯ
ನವದೆಹಲಿ: ಟೇಕಾಫ್ ವೇಳೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಮಾನದ 'ಎಮರ್ಜೆನ್ಸಿ ಡೋರ್' ತೆಗೆದಿದ್ದರು ಎನ್ನಲಾಗಿದೆ.
ಇಂಡಿಗೋ ಏರ್‌ಲೈನ್ಸ್ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಒಂದು ತಿಂಗಳ ಹಿಂದೆ ಚೆನ್ನೈನಿಂದ ತಿರುಚಿರಾಪಳ್ಳಿಗೆ ಪ್ರಯಾಣಿಕನೊಬ್ಬ ಇಂಡಿಗೋ ಫ್ಲೈಟ್ 6E 7339 ರಲ್ಲಿ ATR ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಆಕಸ್ಮಿಕವಾಗಿ ಅನ್ಲಾಕ್ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ನೇಪಾಳ ವಿಮಾನ ದುರಂತ: ಮತ್ತೆ ಇಬ್ಬರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 70ಕ್ಕೆ ಏರಿಕೆ
ತುರ್ತು ನಿರ್ಗಮನ ದ್ವಾರವನ್ನು ಅನ್ಲಾಕ್ ಮಾಡಿದ ಪ್ರಯಾಣಿಕ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಡಿಜಿಸಿಎ ಅಥವಾ ಇಂಡಿಗೋ ವಿಮಾನ ಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಗುರುತು ಅಥವಾ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಬೇಕಾಗಿಲ್ಲದ ಕಾರಣ ಪತ್ರಿಕಾ ಹೇಳಿಕೆಯು ಸಂಸದರನ್ನು ಹೆಸರಿಸದಿದ್ದರೂ, ಪ್ರಯಾಣಿಕರು ತಮ್ಮ ಕ್ರಮಕ್ಕಾಗಿ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ಟರ್ಮಿನಲ್ 2 ಕಾರ್ಯಾಚರಣೆ ಪ್ರಾರಂಭ: ಅನುಭವ ಮೆಲುಕು ಹಾಕಿದ ಮೊದಲ ಪ್ರಯಾಣಿಕ!
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ, ಘಟನೆಯನ್ನು ವರದಿ ಮಾಡಲಾಗಿದೆ ಮತ್ತು ಘಟನೆ ಬಳಿಕ ವಿಮಾನವನ್ನು ಕಡ್ಡಾಯವಾಗಿ ಇಂಜಿನಿಯರಿಂಗ್ ತಪಾಸಣೆಗೆ ಒಳಪಡಿಸಲಾಯಿತು.. ಬಳಿಕ ಸುರಕ್ಷತೆ ಕುರಿತು ತಜ್ಞರು ವರದಿ ನೀಡಿದ ಬಳಿಕವೇ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು. ಇದು ವಿಮಾನದ ವಿಳಂಬಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.
ಚೆನ್ನೈನಿಂದ ತಿರುಚ್ಚಿಗೆ ಹಾರುತ್ತಿದ್ದ ATR 72-600 ವಿಮಾನವು ಬೆಳಿಗ್ಗೆ 10.05 ಕ್ಕೆ ಟೇಕ್ ಆಫ್ ಆಗಬೇಕಿತ್ತು ಆದರೆ ಎರಡು ಗಂಟೆಗಳಿಗೂ ಹೆಚ್ಚು ವಿಳಂಬವಾಯಿತು.
ಇದನ್ನೂ ಓದಿ: ವಂದೇ ಭಾರತ್ ರೈಲುಗಳ ವಿನ್ಯಾಸ ವಿಮಾನಕ್ಕಿಂತಲೂ ಉತ್ತಮ: ಅಶ್ವಿನಿ ವೈಷ್ಣವ್
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಸಿಎ ತನಿಖೆಗೆ ಆದೇಶಿಸಿದ್ದು, ಅಲ್ಲದೆ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.