ಭಾರತದ ನೆಲ ಚೀನಾ ಕಬಳಿಸಿರುವ ಸತ್ಯವನ್ನು ನಿರಾಕರಿಸುತ್ತಿರುವ ಕೇಂದ್ರದ ಧೋರಣೆ ಅಪಾಯಕಾರಿ: ರಾಹುಲ್ ಗಾಂಧಿ
ಲಡಾಖ್‌ನಲ್ಲಿ ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವು, ಚೀನಾದ ವಶದಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹಲ್ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಅಪಾಯಕಾರಿ ಎಂದು ರಾಹುಲ್ ಗುಡುಗಿದ್ದಾರೆ.
Published: 30th January 2023 10:02 AM | Last Updated: 30th January 2023 07:19 PM | A+A A-

ರಾಹುಲ್ ಗಾಂಧಿ
ನವದೆಹಲಿ: ಲಡಾಖ್‌ನಲ್ಲಿ ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವು, ಚೀನಾದ ವಶದಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹಲ್ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಅಪಾಯಕಾರಿ ಎಂದು ರಾಹುಲ್ ಗುಡುಗಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಚೀನೀಯರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಅಪಾಯಕಾರಿ. ಇನ್ನೂ ಹೆಚ್ಚು ಆಕ್ರಮಣಕಾರಿ ಯೋಜನೆಗಳನ್ನು ರೂಪಿಸಲು ಚೀನಿಯರನ್ನು ಪ್ರೇರೇಪಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಚೀನಿಯರೊಂದಿಗೆ ವ್ಯವಹರಿಸುವ ಮಾರ್ಗವೆಂದರೆ ಅವರೊಂದಿಗೆ ದೃಢವಾಗಿ ವ್ಯವಹರಿಸುವುದು ಮತ್ತು ಅವರು ನಮ್ಮ ನೆಲವನ್ನು ಕಬಳಿಸಿರುವುದನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ರಾಹುಲ್ ಗಾಂಧಿ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಲಡಾಖ್‌ನ ಗಲ್ವಾನ್‌ನಲ್ಲಿ 2021ರಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ ಸಂಭವಿಸಿತು. ಇದಾದ ಬಳಿಕ ಚೀನಿಯರು ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಕಬಳಿಸಿದರು. ಆದರೆ ಕೇಂದ್ರ ಸರ್ಕಾರ ಒಂದಿಂಚು ಭೂಮಿಯನ್ನೂ ನಾವು ಕಳೆದುಕೊಂಡಿಲ್ಲ ಎಂದು ಹೇಳುತ್ತಿರುವುದು ದೇಶಕ್ಕೆ ಮಾಡುವ ದ್ರೋಹ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಇದನ್ನೂ ಓದಿ: ಭಾರತಕ್ಕೆ ನೀಡಿದ್ದ ಭರವಸೆ ಈಡೇರಿದೆ: ಶ್ರೀನಗರದಲ್ಲಿ ಧ್ವಜಾರೋಹಣದ ಬಳಿಕ ರಾಹುಲ್ ಗಾಂಧಿ
"ನಾನು ಇತ್ತೀಚೆಗೆ ಕೆಲವು ಮಾಜಿ ಸೈನಿಕರನ್ನು ಭೇಟಿ ಮಾಡಿದ್ದೇನೆ. ಭಾರತೀಯ ಭೂಪ್ರದೇಶವನ್ನು ಚೀನೀಯರು ವಶಪಡಿಸಿಕೊಂಡಿರುವುದನ್ನು ಈ ಮಾಜಿ ಸೈನಿಕರ ನಿಯೋಗ ದೃಢಪಡಿಸಿದೆ. ಅಲ್ಲದೇ ಭಾರತೀಯ ಸೇನೆಯ ಹಲವು ಗಸ್ತು ಕೇಂದ್ರಗಳನ್ನೂ ಚೀನಿ ಸೈನಿಕರು ವಶಪಡಿಸಿಕೊಂಡಿರುವುದನ್ನು ಮಾಜಿ ಸೈನಿಕರ ನಿಯೋಗ ನನಗೆ ತಿಳಿಸಿದೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿಯೂ ಸಹ, ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಚೀನೀಯರು ನಮಗೆ ಏನು ಹೇಳುತ್ತಿದ್ದಾರೆ ಎಂದರೆ, ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ನಾವು ನಿಮ್ಮ ಭೌಗೋಳಿಕತೆಯನ್ನು ಬದಲಾಯಿಸುತ್ತೇವೆ. ನಾವು ಲಡಾಕ್ ಅನ್ನು ಪ್ರವೇಶಿಸುತ್ತೇವೆ, ನಾವು ಅರುಣಾಚಲ (ಪ್ರದೇಶ) ಪ್ರವೇಶಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ಬಗ್ಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ.