ಕರ್ನಾಟಕದಲ್ಲಿ ಸೋತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ: ಕಾಂಗ್ರೆಸ್ ಆರೋಪ

ಕೇಂದ್ರವು ತನ್ನ ಸಂಗ್ರಹದಿಂದ ರಾಜ್ಯ ಸರ್ಕಾರಗಳಿಗೆ ಆಹಾರ ಧಾನ್ಯಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಕುರಿತು ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಕಟುವಾದ ವಾಗ್ದಾಳಿ ನಡೆಸಿದ್ದು, ಇದು ಕರ್ನಾಟಕದ ಮೇಲಿನ ಸೇಡು ಎಂದು ಬಣ್ಣಿಸಿದೆ.
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್
Updated on

ನವದೆಹಲಿ: ಕೇಂದ್ರವು ತನ್ನ ಸಂಗ್ರಹದಿಂದ ರಾಜ್ಯ ಸರ್ಕಾರಗಳಿಗೆ ಆಹಾರ ಧಾನ್ಯಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಕುರಿತು ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಕಟುವಾದ ವಾಗ್ದಾಳಿ ನಡೆಸಿದ್ದು, ಇದು ಕರ್ನಾಟಕದ ಮೇಲಿನ ಸೇಡು ಎಂದು ಬಣ್ಣಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದಕ್ಕೆ ಕರ್ನಾಟಕದ ಜನತೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮೋದಿ ಅವರು ತೆಗೆದುಕೊಂಡ ರಾಜಕೀಯ ನಿರ್ಧಾರವಾಗಿದೆ ಎಂದು ಪಕ್ಷ ಹೇಳಿದೆ.

ಹಣದುಬ್ಬರದ ಒತ್ತಡ ಮತ್ತು ಮುಂಗಾರಿನ ಅನಿಶ್ಚಿತತೆಯಿಂದಾಗಿ ಕೇಂದ್ರವು ಅಧಿಕೃತವಾಗಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಬಫರ್ ಸ್ಟಾಕ್‌ನಿಂದ ಅಕ್ಕಿ ಮತ್ತು ಗೋಧಿ ಮಾರಾಟವನ್ನು ಜೂನ್ 13ರಂದು ಸ್ಥಗಿತಗೊಳಿಸಿತು.

ಕರ್ನಾಟಕ ಸರ್ಕಾರದ ಅನ್ನ ಭಾಗ್ಯ ಯೋಜನೆಯನ್ನು ಹಾಳು ಮಾಡುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

'ಕೇಂದ್ರ ಸರ್ಕಾರವು ಬಡವರ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸುವ ಬದಲು ಎಥೆನಾಲ್ ಉತ್ಪಾದನೆಗೆ ಅಕ್ಕಿ ಪೂರೈಕೆಗೆ ಆದ್ಯತೆ ನೀಡುತ್ತಿದೆ ಎಂಬುದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೊಂದಿಗೆ ಪಿಯೂಷ್ ಗೋಯಲ್ ಅವರ ಬುಧವಾರದ ಸಭೆಯ ನಂತರ ಸ್ಪಷ್ಟವಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

'ಕರ್ನಾಟಕದಂತಹ ರಾಜ್ಯಗಳು ತಮ್ಮ ಆಹಾರ ಭದ್ರತೆಯ ಅಗತ್ಯತೆಗಳನ್ನು ಪೂರೈಸಲು ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಪ್ರತಿ ಕೆಜಿಗೆ 34 ರೂ.ಗಳನ್ನು ಪಾವತಿಸಲು ಸಿದ್ಧವಾಗಿವೆ. ಆದರೆ, ಲಜ್ಜೆಗೆಟ್ಟ ಪ್ರತೀಕಾರದ ಮೋದಿ ಸರ್ಕಾರವು ಆ ಬಾಗಿಲನ್ನು ಮುಚ್ಚಿದೆ. ಆದರೆ, ಎಫ್‌ಸಿಐ ಎಥೆನಾಲ್ ಉತ್ಪಾದಕರಿಗೆ ಪ್ರತಿ ಕೆಜಿ ಅಕ್ಕಿಯನ್ನು 20 ರೂ.ಗೆ ಮಾರಾಟ ಮಾಡುವುದನ್ನು ಮುಂದುವರಿಸಿದೆ' ಎಂದು ಆರೋಪಿಸಿದರು.

ಕರ್ನಾಟಕದಂತಹ ರಾಜ್ಯಗಳಿಗೆ ಅಡೆತಡೆಗಳನ್ನು ಸೃಷ್ಟಿಸಲು ಮತ್ತು ಇಂತಹ ನಿಲುವುಗಳಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಹೊಡೆತ ನೀಡಲು ಪ್ರಧಾನಿಯವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

'ಎರಡು ತಿಂಗಳ ಹಿಂದೆ ತನ್ನನ್ನು ಮತ್ತು ತನ್ನ ಪಕ್ಷವನ್ನು ಅತ್ಯಂತ ಹೀನಾಯವಾಗಿ ತಿರಸ್ಕರಿಸಿದ್ದಕ್ಕಾಗಿ ಕರ್ನಾಟಕದ ಜನತೆಯ ವಿರುದ್ಧದ ಸೇಡು ಇದಾಗಿದೆ. ಆದರೆ, ಪ್ರಧಾನಿಯವರ ಸೇಡಿನ ರಾಜಕೀಯವು ಅವರಿಗೆ ತಿರುಮಂತ್ರವಾಗಲಿದೆ. ಕರ್ನಾಟಕ ಸರ್ಕಾರವು ಅನ್ನಭಾಗ್ಯ 2.0 ರ ಆಹಾರ ಭದ್ರತೆಯ ಭರವಸೆಯನ್ನು ಪೂರೈಸುತ್ತದೆ!' ಎಂದು ರಮೇಶ್ ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com