ಉತ್ತರ ಭಾರತದಲ್ಲಿ ಭಾರಿ ಮಳೆಗೆ 15 ಮಂದಿ ಸಾವು; ಉಕ್ಕಿ ಹರಿಯುತ್ತಿರುವ ನದಿಗಳು!

ಉತ್ತರ ಭಾರತದ ಹಲವು ಭಾಗಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದ್ದು, ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ಘಟನೆಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ದೆಹಲಿಯ ಯಮುನಾ ಸೇರಿದಂತೆ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ.
ಭಾರಿ ಮಳೆಯಿಂದಾಗಿ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಚಿತ್ರ
ಭಾರಿ ಮಳೆಯಿಂದಾಗಿ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಚಿತ್ರ

ನವದೆಹಲಿ: ಉತ್ತರ ಭಾರತದ ಹಲವು ಭಾಗಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದ್ದು, ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ಘಟನೆಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ದೆಹಲಿಯ ಯಮುನಾ ಸೇರಿದಂತೆ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ನಗರ ಮತ್ತು ಪಟ್ಟಣ ಪ್ರದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಅನೇಕ ರಸ್ತೆಗಳು ಮತ್ತು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ. 

ಪ್ರವಾಹದ ಹೊಡೆತದಿಂದ ಗುಡ್ಡಗಾಡು ಪ್ರದೇಶಗಳಲ್ಲಿನ ರಸ್ತೆಗಳನ್ನು ಕೊಚ್ಚಿಕೊಂಡು ಹೋಗಿದ್ದು, ಜನರು ದಿಗ್ಭ್ರಮೆಗೊಂಡಿದ್ದಾರೆ. ಮಳೆಯಿಂದಾಗಿ ರೈಲು ಸೇವೆಗೂ ಅಡ್ಡಿಯಾಗಿದ್ದು, ಸುಮಾರು 17 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸುಮಾರು 12 ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಜಲಾವೃತದಿಂದಾಗಿ ನಾಲ್ಕು ಸ್ಥಳಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಿಗೆ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ದೆಹಲಿಯಲ್ಲಿ 1982 ರ ನಂತರ ಇದೇ ತಿಂಗಳಲ್ಲಿ ಅತ್ಯಂತ ಹೆಚ್ಚಿನ ಮಳೆ ದಾಖಲಾಗಿದ್ದು, ಅಧಿಕಾರಿಗಳು ಯಮುನಾ ನದಿಯ ನೀರಿನ ಮಟ್ಟ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ  24 ಗಂಟೆಗಳಲ್ಲಿ ದೆಹಲಿಯಲ್ಲಿ 153 ಮಿಮೀ ಮಳೆ ಬಿದ್ದರೆ, ಚಂಡೀಗಢ ಮತ್ತು ಹರಿಯಾಣದ ಅಂಬಾಲಾದಲ್ಲಿ ಕ್ರಮವಾಗಿ 322.2 ಮಿಮೀ ಮತ್ತು 224.1 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

<strong>ಧಾರಾಕಾರ ಮಳೆಯಿಂದಾಗಿ ಕೊಚ್ಚಿಕೊಂಡು ಹೋದ ಸೇತುವೆ ಚಿತ್ರ</strong>
ಧಾರಾಕಾರ ಮಳೆಯಿಂದಾಗಿ ಕೊಚ್ಚಿಕೊಂಡು ಹೋದ ಸೇತುವೆ ಚಿತ್ರ

ಹಿಮಾಚಲ ಪ್ರದೇಶದಲ್ಲಿ ಮೂರು ಬಾರಿ ಭೂಕುಸಿತ ಸಂಭವಿಸಿದೆ. ಏಳು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಶಿಮ್ಲಾ ಜಿಲ್ಲೆಯ ಕೋಟ್‌ಗಢ ಪ್ರದೇಶದಲ್ಲಿ ಭೂಕುಸಿತದಿಂದ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರೆ, ಕುಲು ಮತ್ತು ಚಂಬಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕಳೆದ 36 ಗಂಟೆಗಳಲ್ಲಿ ಹದಿನಾಲ್ಕು ಪ್ರಮುಖ ಭೂಕುಸಿತಗಳು ಮತ್ತು 13 ಹಠಾತ್ ಪ್ರವಾಹಗಳು ವರದಿಯಾಗಿದ್ದು, 700 ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಲಾಗಿದೆ. 

ನೆರೆಯ ಉತ್ತರಾಖಂಡದಲ್ಲಿ ಋಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಗುಲಾರ್ ಬಳಿ ಭೂಕುಸಿತದ ನಡುವೆ ಜೀಪ್ ನದಿಗೆ ಬಿದ್ದ ನಂತರ ಮೂವರು ಯಾತ್ರಿಕರು ಗಂಗಾ ನೀರಿನಲ್ಲಿ ಮುಳುಗಿದ್ದಾರೆ.  ಜೀಪಿನಲ್ಲಿ 11 ಮಂದಿ ಇದ್ದರು ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಐವರನ್ನು ರಕ್ಷಿಸಲಾಗಿದ್ದು, ಮೂವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಮೂರು ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಕಾಶಿಪುರ ಪ್ರದೇಶದಲ್ಲಿ ಎರಡು ಮನೆಗಳು ಕುಸಿದು ದಂಪತಿ ಸಾವನ್ನಪ್ಪಿದ್ದು, ಮೊಮ್ಮಗಳು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೋಡಾ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್‌ಗೆ ಭೂಕುಸಿತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com