ಮೂತ್ರ ವಿಸರ್ಜನೆ ಪ್ರಕರಣ: ಎನ್‌ಎಸ್‌ಎ ಹೇರಿಕೆ ವಿರುದ್ಧ ಆರೋಪಿ ಪ್ರವೇಶ್ ಶುಕ್ಲಾ ಪತ್ನಿ ಹೈಕೋರ್ಟ್ ಗೆ ಅರ್ಜಿ

ಸಿಧಿ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಹೇರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಆರೋಪಿಯ ಪತ್ನಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರವೇಶ್ ಶುಕ್ಲಾ
ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರವೇಶ್ ಶುಕ್ಲಾ
Updated on

ಭೋಪಾಲ್: ಸಿಧಿ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಹೇರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಆರೋಪಿಯ ಪತ್ನಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಬುಡಕಟ್ಟು ಕಾರ್ಮಿಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ವೈರಲ್ ಆದ ನಂತರ ಶುಕ್ಲಾ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಗುರುವಾರ ಹಿರಿಯ ವಕೀಲ ಅನಿರುದ್ಧ್ ಮಿಶ್ರಾ ಅವರ ಮೂಲಕ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಮನವಿಯಲ್ಲಿ, ಕಾಂಚನ್ ಶುಕ್ಲಾ ಅವರು ರಾಜಕೀಯ ಪ್ರಭಾವದಿಂದಾಗಿ ತಮ್ಮ ಪತಿ ವಿರುದ್ಧ ಎನ್‌ಎಸ್‌ಎಯನ್ನು ಹೇರಲಾಗಿದೆ. ಪ್ರವೇಶ್ ಶುಕ್ಲಾ ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ಅವರು ಹೇಳಿದ್ದಾರೆ.

ರಾಜಕೀಯವಾಗಿ ಪ್ರಭಾವಿ ವ್ಯಕ್ತಿಗಳ ಒತ್ತಡ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದ ಮೇರೆಗೆ ಎನ್ಎಸ್ಎಯನ್ನು ಹೇರಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ವಕೀಲ ಅನಿರುದ್ಧ್ ಮಿಶ್ರಾ ಐಎಎನ್‌ಎಸ್‌ನೊಂದಿಗೆ ಮಾತನಾಡುತ್ತಾ, 'ಎನ್‌ಎಸ್‌ಎಯ ಸೆಕ್ಷನ್ 3 (2) ರ ಅಡಿಯಲ್ಲಿ ಯಾವುದೇ ಅಪರಾಧವನ್ನು ಮಾಡಲಾಗಿಲ್ಲವಾದ್ದರಿಂದ ಅವರನ್ನು (ಪ್ರವೇಶ್ ಶುಕ್ಲಾ) ಬಿಡುಗಡೆ ಮಾಡಬೇಕೆಂಬುದು ನಮ್ಮ ಮುಖ್ಯ ಪ್ರಾರ್ಥನೆಯಾಗಿದೆ. ರಾಜಕೀಯ ಒತ್ತಡದಿಂದಾಗಿ ಜಿಲ್ಲಾಧಿಕಾರಿಗಳು ಎನ್‌ಎಸ್‌ಎಯನ್ನು ಹೇರಿದರು ಮತ್ತು ಅವರಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು ಎಂದು ತಿಳಿಸಿದರು.

ಅರ್ಜಿಯಲ್ಲಿ, 'ಬಂಧನ ಆದೇಶವು ಬಂಧಿತನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಏಕೆಂದರೆ, ಇದು ಸಂವಿಧಾನದ 22 (5) ನೇ ವಿಧಿಯ ಉಲ್ಲಂಘನೆಯಾಗಿದೆ. ಏಕೆಂದರೆ, ಅದು ಅವರ ಬಂಧನವನ್ನು ಸಲಹಾ ಮಂಡಳಿಗೆ ಮತ್ತು ಅವರ ಬಂಧನಕ್ಕೆ ಆದೇಶಿಸಿದ ಪ್ರಾಧಿಕಾರಕ್ಕೆ ಮನವಿ ಮಾಡುವ ಹಕ್ಕನ್ನು ನಿರಾಕರಿಸುತ್ತದೆ'.

ಮುಂದಿನ ವಾರದ ವೇಳೆಗೆ ಮುಖ್ಯ ನ್ಯಾಯಮೂರ್ತಿ ರವಿ ಮಳಿಮಠ್ ಮತ್ತು ನ್ಯಾಯಮೂರ್ತಿ ವಿಶಾಲ್ ಮಿಶ್ರಾ ಅವರು ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ವಕೀಲ ಮಿಶ್ರಾ ಹೇಳಿದ್ದಾರೆ. 

'ಪ್ರವೇಶ್ ಶುಕ್ಲಾ ಅವರ ಕುಟುಂಬದ ಮನೆಯನ್ನು ನೆಲಸಮಗೊಳಿಸುವುದರ ವಿರುದ್ಧ ಮತ್ತು ಅವರೆಲ್ಲರನ್ನು ನಿರಾಶ್ರಿತರನ್ನಾಗಿ ಮಾಡಿರುವುದರ ವಿರುದ್ಧ ಪ್ರತ್ಯೇಕ ಅರ್ಜಿಯನ್ನು ಸಹ ಸಲ್ಲಿಸಲಾಗುವುದು. ಮಧ್ಯಪ್ರದೇಶದಲ್ಲಿ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಕಾರಣ ಈ ಸಂಪೂರ್ಣ ಪ್ರಕರಣ ರಾಜಕೀಯ ಪ್ರೇರಿತವಾಗಿದೆ' ಎಂದು ಮಿಶ್ರಾ ಹೇಳಿದ್ದಾರೆ.

ಈ ಘಟನೆ ರಾಜ್ಯದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತ್ರಸ್ತ ದಶಮತ್ ರಾವತ್ ಅವರನ್ನು ಭೋಪಾಲ್‌ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿ, ಪಾದ ತೊಳೆದು ಅವರ ವಿರುದ್ಧದ ಅಮಾನವೀಯ ಕೃತ್ಯಕ್ಕೆ ಕ್ಷಮೆ ಯಾಚಿಸಿದರು.

ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಶುಕ್ಲಾ ಅವರನ್ನು ಬಂಧಿಸಲಾಗಿದೆ ಮತ್ತು ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com